ಬೆಂಗಳೂರು, ಫೆ.24- ಮಂಡ್ಯ ಜನರ ಹಾಗೂ ಅಂಬಿ ಅಭಿಮಾನಿಗಳ ಒತ್ತಾಯದ ಮೇರೆಗೆ ಜನಸೇವೆ ಮಾಡಲು ಒಪ್ಪಿಕೊಂಡಿದ್ದೇನೆ ಎಂದು ಹೇಳುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸಲು ಸಿದ್ಧ ಎಂಬ ಬಗ್ಗೆ ಸುಮಲತಾ ಅಂಬರೀಷ್ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟೂಡಿಯೋದಲ್ಲಿ ಅಂಬರೀಷ್ ಅವರ ಮೂರನೇ ತಿಂಗಳ ಪುಣ್ಯಾರಾಧನೆ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸುಮಲತಾ ಅವರು, ತಾವು ಜನಸೇವೆ ಮಾಡಲು ನಿರ್ಧರಿಸಿರುವುದು ನಿಜ. ಆದರೆ ಅದಕ್ಕಾಗಿ ರಾಜಕೀಯ ತಂತ್ರಗಾರಿಕೆ, ರಣತಂತ್ರಗಳನ್ನೆಲ್ಲಾ ಬಳಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಂಬರೀಷ್ ಅವರು ಕಾಂಗ್ರೆಸ್ನಲ್ಲಿದ್ದು ಸುದೀರ್ಘ ರಾಜಕೀಯ ಜೀವನವನ್ನು ಪಕ್ಷದಲ್ಲೇ ಕಳೆದಿದ್ದಾರೆ. ಹಾಗಾಗಿ ಮುಂದಿನಗಳಲ್ಲಿ ಜನಸೇವೆಯ ಅವಕಾಶ ಕಾಂಗ್ರೆಸ್ನಿಂದ ಸಿಗಬಹುದು ಎಂಬ ನಿರೀಕ್ಷೆ ಇದೆ. ಇಲ್ಲಿಯವರೆಗೂ ಈ ವಿಷಯವಾಗಿ ಯಾರ ಬಳಿಯೂ ಚರ್ಚೆ ಮಾಡಿಲ್ಲ. ಯಾರನ್ನು ಸಂಪರ್ಕಿಸಿಲ್ಲ ರಾಜತಂತ್ರಗಾರಿಕೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮಂಡ್ಯದ ಜನ ಒತ್ತಾಯ ಮಾಡಿದ್ದರಿಂದ ಜನಸೇವೆ ಮಾಡಲು ಒಪ್ಪಿಕೊಂಡಿದ್ದೇನೆ ಎಂದು ಹೇಳಿದರು.
ಅಂಬರೀಷ್ ಅವರ ಪ್ರೀತಿ ನನ್ನನ್ನು ಇಲ್ಲಿಯವರಿಗೂ ಕರೆದುಕೊಂಡು ಬಂದಿದೆ. ಮಂಡ್ಯದ ಜನರ ಜತೆ ಸದಾಕಾಲ ಇರುತ್ತೇನೆ ಎಂದು ಹೇಳುವ ಮೂಲಕ ಪತಿ ಅಂಬರೀಷ್ ಅವರನ್ನು ನೆನೆದು ಸುಮಲತಾ ಭಾವುಕರಾದರು.