ಬೆಂಗಳೂರು: ಏಕೀಕರಣ ಹೋರಾಟಗಾರ, ಹಿರಿಯ ಸಾಹಿತಿ ನಾಡೋಜ ಕೋ.ಚೆನ್ನಬಸಪ್ಪ ವಿಧಿವಶರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.
ಉಸಿರಾಟದ ತೊಂದರೆ ಹಾಗೂ ವಯೋಸಹಜವಾದ ಕಾಯಿಲೆಯಿಂದ ಬಳಲುತ್ತಿದ್ದ ಕೋ ಚೆನ್ನಬಸಪ್ಪ ಕೆಲ ದಿನಗಳ ಹಿಂದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಮಡುಗು ಸಮೀಪದ ಆಲೂರು ಗ್ರಾಮದಲ್ಲಿ 1922 ಫೆ 21 ರಂದು ಚೆನ್ನಬಸಪ್ಪ ಜನಿಸಿದ್ದರು. ತಂದೆ ವೀರಣ್ಣ. ತಾಯಿ ಬಸಮ್ಮ. ಕಾನಮಡುಗು ಗ್ರಾಮದಲ್ಲಿ ಪ್ರೈಮರಿ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಮುಗಿಸಿದ ನಂತರ ಪ್ರೌಢಶಾಲೆಗೆ ಬಳ್ಳಾರಿ, ನಂತರ ಕಾಲೇಜು ವಿದ್ಯಾಭ್ಯಾಸ ಅನಂತಪುರದಲ್ಲಿ ಮಾಡಿದ್ದರು.
ಕ್ವಿಟ್ ಇಂಡಿಯಾ ಚಳವಳಿಯಲ್ಲಿ ವಿದ್ಯಾರ್ಥಿ ಮುಖಂಡರಾಗಿ ಭಾಗಿಯಾಗಿ ಸೆರೆವಾಸ ಅನುಭವಿಸಿದ್ದರು. ಬಿಡುಗಡೆಯ ನಂತರ ಬಿ.ಎ. ಪದವಿ, ಬೆಳಗಾವಿ ಕಾಲೇಜಿನಿಂದ ಲಾ ಪದವಿ, ಇತಿಹಾಸ ಮತ್ತು ರಾಜ್ಯಶಾಸ್ತ್ರದಲ್ಲಿ ಎಂಎ ಪದವಿ ಪಡೆದರು.
1946 ರಲ್ಲಿ ಮುಂಬಯಿ ಹೈಕೋರ್ಟಿನಲ್ಲಿ ವಕೀಲರಾಗಿ ನೋಂದಣಿಗೊಂಡು, ಬಳ್ಳಾರಿ ಜಿಲ್ಲಾ ಕೋರ್ಟಿನಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದರು. 1965 ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಜ್ ಆಗಿ ನೇಮಕವಾದರು. ನಿವೃತ್ತಿಯ ನಂತರ ಪುನಃ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿ, ಹಲವಾರು ಕಾರ್ಮಿಕ ಸಂಘಗಳ, ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಅಧ್ಯಕ್ಷರ ಜವಾಬ್ದಾರಿ ನಿರ್ವಹಿಸಿದ್ದರು.
ಸಾಹಿತ್ಯದಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಚೆನ್ನಬಸಪ್ಪ, 80 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಸ್ವಾತಂತ್ರ್ಯ ಮಹೋತ್ಸವ, ಪ್ರಾಣಪಕ್ಷಿ, ಜೀವತೀರ್ಥ ಮೊದಲಾದ 5 ಕವನ ಸಂಕಲನಗಳು. ಗಡಿಪಾರು, ನಮ್ಮೂರ ದೀಪ, ಗಾಯಕನಿಲ್ಲದ ಸಂಗೀತ ಮುಂತಾದ 6 ಕಥಾ ಸಂಕಲನಗಳು. ಹಿಂದಿರುಗಿ ಬರಲಿಲ್ಲ, ನೊಗದ ನೇಣು, ರಕ್ತತರ್ಪಣ, ಬೇಡಿ ಕಳಚಿತು-ದೇಶ ಒಡೆಯಿತು ಮೊದಲಾದ 9 ಕಾದಂಬರಿಗಳು. ಶ್ರೀ ಅರವಿಂದರು, ಶ್ರೀ ಮಾತಾಜಿ, ಶ್ರೀ ಮೃತ್ಯುಂಜಯಸ್ವಾಮಿಗಳು ಮೊದಲಾದ 8 ಜೀವನಚರಿತ್ರೆಗಳು. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ, ದೃಢಪ್ರತಿಜ್ಞೆ, ಕುವೆಂಪು ವೈಚಾರಿಕತೆ ಮೊದಲಾದ ವಿಮರ್ಶಾ ಗ್ರಂಥಗಳನ್ನು ಬರೆದಿದ್ದಾರೆ.
ಚೆನ್ನಬಸಪ್ಪ ಅವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ ದೊರೆತಿದೆ.
writer Ko Channabasappa passes away