ಪ್ರಧಾನಿ ಮೋದಿಯವರಿಗೆ ಸಿಯೋಲ್ ಶಾಂತಿ ಪ್ರಶಸ್ತಿ ಪ್ರದಾನ

ಸಿಯೋಲ್​: ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಕ್ಷಿಣ ಕೊರಿಯಾದ ಪ್ರತಿಷ್ಠಿತ ಸಿಯೋಲ್​ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ಈ ಪ್ರಶಸ್ತಿ 130 ಕೋಟಿ ಭಾರತೀಯ ಅರ್ಪಿಸಿದ್ದಾರೆ.

ಎರಡು ದಿನಗಳ ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರಿಗೆ ಕೊರಿಯಾ ಅಧ್ಯಕ್ಷ ಮೂನ್​ ಜೆ ಇನ್​​ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೋದಿ, ಈ ಪ್ರಶಸ್ತಿ ವೈಯಕ್ತಿಕವಾಗಿ ನನಗೆ ಬಂದಿರಬಹುದು. ಆದರೆ ಇದು ಭಾರತ ದೇಶಕ್ಕೆ ಹಾಗೂ ತಮ್ಮ 5 ವರ್ಷಗಳ ಸಾಧನೆಗೆ ಸಂದ ಗೌರವ ಎಂದರು. ಅಷ್ಟೇ ಅಲ್ಲ ಇದು 130 ಕೋಟಿ ಭಾರತೀಯರಿಗೆ ಸಂದ ಭಾಗ್ಯ ಎಂದು ವರ್ಣಿಸಿದರು.

ಅಂತಾರಾಷ್ಟ್ರೀಯ ಸಹಕಾರ ಮತ್ತು ಜಾಗತಿಕ ಆರ್ಥಿಕ ಅಭಿವೃದ್ಧಿಗೆ ನೀಡಿದ ಕೊಡುಗೆಗಳಿಗಾಗಿ 2018ನೇ ಸಾಲಿನ ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದರು. ಬಳಿಕ ಮೋದಿ ಅವರ ಜೀವನ ಹಾಗೂ ಸಾಧನೆಗಳನ್ನು ಬಿಂಬಿಸುವ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.

ಸಿಯೋಲ್ ಶಾಂತಿ ಪ್ರಶಸ್ತಿಯನ್ನು 1988ರಲ್ಲಿ ನಡೆದ 24ನೇ ಬೇಸಿಗೆ ಒಲಿಂಪಿಕ್ಸ್‌ನ ಯಶಸ್ಸಿನ ಸ್ಮರಣೆಗಾಗಿ ಸ್ಥಾಪಿಸಲಾಗಿತ್ತು. ಅಂದಿನ ಒಲಿಂಪಿಕ್ಸ್‌ ಗೇಮ್ಸ್ ಮಹಾತ್ಮಾ ಗಾಂಧಿ ಅವರ ಜನ್ಮದಿನದಂದು ಮುಕ್ತಾಯಗೊಂಡಿತ್ತು.

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ ಜೇ ಸಮ್ಮುಖದಲ್ಲಿ ಭಾರತ, ಕೊರಿಯಾಗಳು 7 ಮಹತ್ವ ಒಪ್ಪಂದಗಳಿಗೆ ಸಹಿ ಹಾಕಿ ದಾಖಲೆಗಳನ್ನು ವಿನಿಮಯ ಮಾಡಿಕೊಂಡವು.

ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಜಾಗತಿಕ ಸಮುದಾಯ ಮಾತುಕತೆಗಳನ್ನು ಒಗ್ಗಟ್ಟಾಗಿ ಕೃತಿಗಿಳಿಸಬೇಕಾದ ಸಮಯ ಬಂದಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ರಕ್ಷಣಾ ವಲಯದಲ್ಲಿ ಭಾರತ-ಕೊರಿಯಾ ಸಹಕಾರ ವೃದ್ಧಿಸುತ್ತಿದ್ದು, ಕೆ-9 ವಜ್ರ ಆರ್ಟಿಲರಿ ಬಂದೂಕನ್ನು ಭಾರತೀಯ ಸೇನೆಗೆ ಸೇರ್ಪಡೆ ಮಾಡಿಕೊಳ್ಳುತ್ತಿರುವುದು ಇದಕ್ಕೆ ಪ್ರಮುಖ ನಿದರ್ಶನ ಎಂದು ಪ್ರಧಾನಿ ಮೋದಿ ನುಡಿದರು.

ಪುಲ್ವಾಮಾ ಉಗ್ರ ದಾಳಿಯನ್ನು ಖಂಡಿಸಿ ಭಯೋತ್ಪಾದನೆ ವಿರುದ್ಧದ ನಮ್ಮ ಸಮರಕ್ಕೆ ಬೆಂಬಲ ಘೋಷಿಸಿದ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಅವರಿಗೆ ಕೃತಜ್ಞತೆ ಅರ್ಪಿಸುತ್ತೇನೆ. ನಮ್ಮ ಎರಡೂ ದೇಶಗಳ ನಡುವಣ ಒಪ್ಪಂದಗಳು ಭಯೋತ್ಪಾದನೆ ವಿರುದ್ಧದ ಸಮರವನ್ನು ಮುಂದಿನ ಹಂತಕ್ಕೆ ಒಯ್ಯಲಿವೆ ಎಂದು ಮೋದಿ ಹೇಳಿದರು.

South Korea, PM Modi receives Seoul Peace Prize

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ