ವಿಶ್ವದ ನಂಬರ್ ಒನ್ ಡಿಜಿಟಲ್ ನಗರ ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಫೆ.20-ಉದ್ಯಾನನಗರಿ ಬೆಂಗಳೂರು ವಿಶ್ವದ ನಂಬರ್ ಒನ್ ಡಿಜಿಟಲ್ ಸಿಟಿ ಎಂಬ ಅಗ್ರಶ್ರೇಯಾಂಕಕ್ಕೆ ಪಾತ್ರವಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರನ್ನು ಮುಂದಿನ ತಲೆಮಾರಿನ ತಂತ್ರಜ್ಞಾನ ತಾಣವನ್ನಾಗಿ ಮಾಡಲು ರಾಜ್ಯ ಸರ್ಕಾರ ದೃಢ ಸಂಕಲ್ಪ ಮಾಡಿದ್ದು, ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಘೋಷಿಸಿದರು.

ಬೆಂಗಳೂರಿನ ಯಲಹಂಕ ವೈಮಾನಿಕ ನೆಲೆಯಲ್ಲಿ ಇಂದಿನಿಂದ ಆರಂಭವಾಗಿರುವ 5 ದಿನಗಳ 12ನೇ ಏರೋ ಇಂಡಿಯಾ ಶೋ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕರ್ನಾಟಕವು ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಅತ್ಯಂತ ಮುಂಚೂಣಿಯಲ್ಲಿದೆ. 2018-19ನೇ ಸಾಲಿನಲ್ಲಿ ಕರ್ನಾಟಕದ ಜಿಎಸ್‍ಡಿಪಿ(ರಾಜ್ಯದ ಒಟ್ಟು ಉತ್ಪನ್ನ) 12 ಲಕ್ಷ ಕೋಟಿ ರೂ.ಗಳಷ್ಟಿತ್ತು. ಅದು ಈ ಸಾಲಿನಲ್ಲಿ ಶೇ.9.6ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ವೈಮಾನಿಕ ಉದ್ಯಮ ಕ್ಷೇತ್ರ ನಾಲ್ಕು ವರ್ಷಗಳಲ್ಲಿ ಶೇ.30ರಷ್ಟು ಪ್ರಗತಿ ಕಂಡಿದೆ. ರಾಜ್ಯದಲ್ಲಿ ಹೊಸ ಹೊಸ ಆವಿಷ್ಕಾರ ಮತ್ತು ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗುತ್ತಿದೆ ಎಂದು ಹೇಳಿದರು.

ಕರ್ನಾಟಕವು ವಾಣಿಜ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಉತ್ತಮ ಪರಿಸರ, ಕುಶಲ ಮತ್ತು ಪ್ರತಿಭಾವಂತ ಕಾರ್ಯಪಡೆ, ಅತ್ಯಾಧುನಿಕ ತಂತ್ರಜ್ಞಾನ ಪರಿಣಿತಿ, ಹೊಸ ಹೊಸ ಪರಿಕಲ್ಪನೆ ಮತ್ತು ವಾಣಿಜ್ಯಸ್ನೇಹಿ ನೀತಿಗಳಿಂದ ಉತ್ತಮ ಉದ್ಯಮ ತಾಣವಾಗಿ ಪರಿವರ್ತಿತವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಬಡವರು ಮತ್ತು ಮಧ್ಯಮವರ್ಗದ ಜನರಿಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ವಾಣಿಜ್ಯ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ರಾಜ್ಯಸರ್ಕಾರ ಗಮನ ಕೇಂದ್ರೀಕರಿಸಿದೆ. ಇದಕ್ಕಾಗಿ ಹಲವಾರು ಚಲನಶೀಲ ಕ್ರಮಗಳನ್ನು ಕೈಗೊಂಡಿದೆ. ಆರ್ಥಿಕ ಸುಧಾರಣೆಯು ನಮ್ಮ ಸರ್ಕಾರದ ಪ್ರಥಮ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ದೇಶ-ವಿದೇಶಗಳ ಹೂಡಿಕೆದಾರರು ರಾಜ್ಯದಲ್ಲಿ ಬಂಡವಾಳ ಹೂಡಲು ಪೂರಕವಾಗುವಂತಹ ಸ್ನೇಹಮಯಿ ವಾತಾವರಣವನ್ನು ಸೃಷ್ಟಿಸಲಾಗಿದೆ. ಬಂಡವಾಳ ಆಕರ್ಷಿಸುತ್ತಿರುವ ದೇಶದ ನಂ.1 ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಮೂರನೇ ಬಾರಿ ಪಾತ್ರವಾಗಿದೆ ಎಂದು ಕುಮಾರಸ್ವಾಮಿ ಹೆಮ್ಮೆಯಿಂದ ಹೇಳಿಕೊಂಡರು.

ವಾಣಿಜ್ಯ ಸುಧಾರಣೆ ಕ್ರಿಯಾ ಯೋಜನೆ ಮೂಲಕ ವಾಣಿಜ್ಯ ದೃಷ್ಟಿಕೋನದ ರಾಜ್ಯವೆಂಬ ಕೀರ್ತಿಗೆ ಕರ್ನಾಟಕ ಪಾತ್ರವಾಗಿದೆ. ಅದೇ ರೀತಿ ಭವಿಷ್ಯದ ಅತ್ಯಾಧುನಿಕ ಮತ್ತು ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಉತ್ಪಾದಕತೆ ಮತ್ತು ಸ್ಪರ್ಧಾತ್ಮಕತೆಯನ್ನು ಸರಿದೂಗಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಭಾರತದ ಪ್ರಥಮ ವೈಮಾಂತರಿಕ್ಷ ವಿಶೇಷ ಆರ್ಥಿಕ ವಲಯ ಕಾರ್ಯನಿರ್ವಹಣೆ ಮೂಲಕ ಜಾಗತಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ. ಅತ್ಯಾಧುನಿಕ ರಕ್ಷಣಾ ಮತ್ತು ವೈಮಾಂತರಿಕ್ಷ ಉದ್ಯಾನವನ ಅಭಿವೃದ್ಧಿಗೊಳಿಸಿದ ಮೊದಲ ರಾಜ್ಯ ಎಂಬ ಹೆಸರಿಗೆ ಕರ್ನಾಟಕ ಪಾತ್ರವಾಗಿದೆ ಎಂದು ಅವರು ವಿವರಿಸಿದರು.

ಸಂಪೂರ್ಣ ವಾಯುನೆಲೆ ನಿರ್ವಹಣಾ ಸೇವೆಗಳನ್ನು ಒದಗಿಸಲು ಮೈಸೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಂಆರ್‍ಒ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಮಂಗಳೂರಿನಲ್ಲಿ ರಕ್ಷಣಾ ತಯಾರಿಕೆ ಕೈಗಾರಿಕಾ ಸಮೂಹವನ್ನು ಸ್ಥಾಪಿಸಲಾಗುತ್ತಿದೆ. ದೇವನಹಳ್ಳಿಯಲ್ಲಿರುವ ಏರೋ ಸ್ಪೇಸ್ ಪಾರ್ಕ್ ಈ ಕ್ಷೇತ್ರಕ್ಕೆ ಪೂರಕ ಸಹಕಾರ ನೀಡುತ್ತಿದೆ. ವೈಮಾಂತರಿಕ್ಷ ಉತ್ಪನ್ನಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಿಸಲು ನಮ್ಮ ರಾಜ್ಯದಲ್ಲಿ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ನಿನ್ನೆ ಸೂರ್ಯಕಿರಣ ವಿಮಾನ ಪತನಗೊಂಡು ಮೃತಪಟ್ಟ ಪೈಲಟ್ ವಿಂಗ್ ಕಮಾಂಡರ್ ಸಾಹೀಲ್‍ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ರಕ್ಷಣಾ ಸಚಿವೆ ನಿರ್ಮಲಾಸೀತಾರಾಮನ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್‍ಪ್ರಭು, ರಕ್ಷಣಾ ಖಾತೆ ರಾಜ್ಯ ಸಚಿವ ಡಾ.ಸುಭಾಷ್‍ರಾಮರಾವ್ ಬಾಂಬ್ರೆ, ಭೂಸೇನೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ವಾಯುಪಡೆ ಮುಖ್ಯಸ್ಥ ಏರ್‍ಶಿಪ್ ಮಾರ್ಷಲ್ ಬೀರೇಂದ್ರಸಿಂಗ್ ಧನೋವಾ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲನ್ಬಾ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ