ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮೂವರು ಶಾಸಕರ ವಿರುದ್ಧ ಎಸಿಬಿಗೆ ದೂರು ನೀಡುವುದಾಗಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ತಿಳಿಸಿದ್ದಾರೆ.
ಕೋಲಾರ ಶಾಸಕ ಶ್ರೀನಿವಾಸಗೌಡ ಸೇರಿದಂತೆ ಮುಖ್ಯಮಂತ್ರಿ ಹಾಗೂ ಇನ್ನಿಬ್ಬರು ಶಾಸಕರ ವಿರುದ್ಧ ದೂರು ನೀಡಲು ಅವರು ನಿರ್ಧರಿಸಿದ್ದಾರೆ.
ಆಪರೇಷನ್ ಕಮಲ ಸಂಬಂಧ 25 ಕೋಟಿ ಹಣ ಬರಬೇಕಿದ್ದು, ಐದು ಕೋಟಿ ಮುಂಗಡ ನೀಡಿದ್ದಾರೆ ಎಂಬ ಹೇಳಿಕೆಯನ್ನು ಆಧರಿಸಿ ಎಸಿಬಿಗೆ ದೂರು ನೀಡಲಾಗುತ್ತಿದೆ.
ಶ್ರೀನಿವಾಸಗೌಡ ಪಡೆದಿದ್ದ 5 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳು ಅಡ್ಜೆಸ್ಟ್ ಮಾಡಿದ್ದಾರೆ. ಪ್ರಕರಣ ಮುಚ್ಚಿಹಾಕಲು ತಮ್ಮ ಕೈಯಿಂದಲೇ ಮುಖ್ಯಮಂತ್ರಿ ಹಣ ನೀಡಿದ್ದಾರೆ. ಈ ಪ್ರಕರಣ ಮನಿ ಲ್ಯಾಂಡ್ರಿಂಗ್ ಆ್ಯಕ್ಟ್ ಅಡಿ ತನಿಖೆಯಾಗಬೇಕು. ಇದನ್ನು ಮುಖ್ಯಮಂತ್ರಿಗಳು ಇಡಿಗೆ ತಿಳಿಸಬೇಕಿತ್ತು.ಇದ್ಯಾವುದೂ ಆಗದ ಕಾರಣ ಸಿಎಂ ವಿರುದ್ಧವೂ ತನಿಖೆ ನಡೆಸುವಂತೆ ಸಿಬಿಐಗೆ ಮನವಿ ಮಾಡುವುದಾಗಿ ಅಬ್ರಹಾಂ ತಿಳಿಸಿದ್ದಾರೆ.
ಇದಲ್ಲದೆ ಶಾಸಕರಾದ ಅಶ್ವಥನಾರಾಯಣ, ವಿಶ್ವನಾಥ್ ಹಾಗೂ ಮುಖಂಡ ಸಿ.ಪಿ.ಯೋಗೇಶ್ವರ್ ವಿರುದ್ಧವೂ ದೂರು ನೀಡುವುದಾಗಿ ಅವರು ಹೇಳಿದ್ದಾರೆ.