ಬಿಪಿನ್ ರಾವತ್‍ರವರಿಂದ ಎಚ್‍ಎಎಲ್ ನಿರ್ಮಿತ ತೇಜಸ್ ಯುದ್ಧ ವಿಮಾನದ ಬಗ್ಗೆ ಮೆಚ್ಚುಗೆ

ಬೆಂಗಳೂರು: ಎಚ್‍ಎಎಲ್‍ನ ಹೆಮ್ಮ್ಮೆಯ ಉತ್ಪಾದನೆಯಲ್ಲಿ ಒಂದಾದ ತೇಜಸ್ ಸ್ವದೇಶಿ ನಿರ್ಮಿತ ಯುದ್ಧ ವಿಮಾನದಲ್ಲಿ ಭೂ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಕೇಂದ್ರ ಸರ್ಕಾರದ ರಕ್ಷಣಾ ಸಲಹೆಗಾರ ಪ್ರೊ.ವಿಜಯ್‍ರಾಘವನ್ ಅವರು ಇಂದು ಹಾರಾಟ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಪಿನ್‍ರಾವತ್ ಅವರು 12.5ಕ್ಕೆ ಸ್ವದೇಶಿ ನಿರ್ಮಿತ ತೇಜಸ್ ಸವಾರಿ ಆರಂಭಿಸಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಆಕಾಶದಲ್ಲಿ ತೇಲಿದರು.

ಈವರೆಗೂ ತರಬೇತಿ ಯುದ್ಧ ವಿಮಾನವಾಗಿ ಬಳಕೆಯಾಗುತ್ತಿರುವ ತೇಜಸ್ಸನ್ನು ಈಗ ಸೇನೆಗೆ ಸೇರ್ಪಡೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಇಂದು ಪರಿಕ್ಷಾರ್ಥ ಹಾರಾಟ ಯಶಸ್ವಿಯಾಯಿತು.

ಭೂ ಸೇನಾ ಮುಖ್ಯಸ್ಥ ಬಿಪಿನ್‍ರಾವತ್ ಅವರು ತೇಜಸ್‍ನಲ್ಲಿ ಹಾರಾಟ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ಅದ್ಭುತವಾದ ಯುದ್ಧ ವಿಮಾನವಾಗಿದೆ. ತೇಜಸ್‍ನಲ್ಲಿ ಹಾರಾಟ ಮಾಡಲು ಅವಕಾಶ ಮಾಡಿಕೊಟ್ಟ ಎಚ್‍ಎಎಲ್ ಹಾಗೂ ಡಿಆರ್‍ಡಿಒ ಅಧಿಕಾರಿಗಳಿಗೆ ಧನ್ಯವಾದ ಹೇಳಿದರು.

ಹಾರಾಟದ ಅನುಭವ ಅದ್ಭುತವಾಗಿತ್ತು. ಜೀವಮಾನದಲ್ಲಿ ಇದನ್ನು ಮರೆಯಲು ಸಾಧ್ಯವಿಲ್ಲ. ಶತ್ರುಗಳ ಸ್ಥಳಗಳ ಮೇಲೆ ನಿರ್ದಿಷ್ಟವಾಗಿ ಮತ್ತು ಕರಾರುವಕ್ಕಾಗಿ ದಾಳಿ ಮಾಡಲು ತೇಜಸ್ ಅತ್ಯಂತ ಸಮರ್ಥವಾಗಿದೆ. ಹಾರಾಟದ ವೇಳೆ ಪೈಲೆಟ್ ಅವರು ರೆಡಾರ್‍ನ ನಿಖರತೆಯನ್ನು ತೋರಿಸಿದರು. ಹೆಚ್ಚಿನ ಸ್ಟಂಟ್‍ಗಳನ್ನು ಮಾಡದೆ ಯುದ್ಧ ಪರಿಕ್ಷಾರ್ಥವಾಗಿ ಈ ವಿಮಾನವನ್ನು ಪರೀಕ್ಷಿಸಲಾಯಿತು ಎಂದು ತಿಳಿಸಿದರು.

ತೇಜಸ್ ಭಾರತೀಯ ಸೇನೆ ಭಾಗವಾಗುತ್ತಿರುವುದರಿಂದ ವಾಯು ಸೇನೆಯ ಸಾಮಥ್ರ್ಯ ಇನ್ನಷ್ಟು ದುಪ್ಪಟ್ಟಾಗುತ್ತಿದೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಹಾಜರಿದ್ದ ಡಿಆರ್‍ಡಿಒ ಅಧ್ಯಕ್ಷ ಸತೀಶ್‍ರೆಡ್ಡಿ ಅವರು, ತೇಜಸ್‍ಗೆ ಸುರಕ್ಷತಾ ಪ್ರಮಾಣಪತ್ರ ಲಭ್ಯವಾಗಿದೆ.ಇದರ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ.ಶೀಘ್ರವೇ ಭಾರತೀಯ ಸೇನೆಗೆ ಸೇರ್ಪಡೆಯಾಗಲಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ