ಬಿಬಿಎಂಪಿಯ ಬಜೆಟ್ ಉತ್ತಮವಾಗಿ ಮೂಡಿ ಬಂದಿದೆ: ಟಿ.ಎ.ಶರವಣ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2019-20 ಸಾಲಿನ ಹಣಕಾಸು ಬಜೆಟ್ ಬಹಳ ಉತ್ತಮವಾಗಿ ಮೂಡಿ ಬಂದಿದ್ದು ,ಮೈತ್ರಿ ಆಡಳಿತದ 4ನೇ ಬಜೆಟ್ ಹಣಕಾಸು ಮತ್ತು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಹೇಮಲತಾ ಗೋಪಾಲಯ್ಯ ಅವರು ಬಿ.ಬಿ.ಎಂ.ಪಿ ಕೌನ್ಸಿಲ್ ನಲ್ಲಿ ಮಂಡನೆ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಟಿ.ಎ.ಶರವಣ ಪ್ರತಿಕ್ರಿಯಿಸಿದ್ದಾರೆ.

ಹಾಗೆಯೇ ಕೌನ್ಸಿಲ್ ಇತಿಹಾಸದಲ್ಲೇ ಪ್ರಪ್ರಥಮವಾಗಿ ಒಂದು ಹೆಣ್ಣು ಮಗಳು ಮಂಡನೆ ಮಾಡಿರುವುದು ನಮ್ಮ ಹೆಮ್ಮೆಯ ವಿಷಯ. ಇವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಬಿಬಿಎಂಪಿ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮಹಾಲಕ್ಷ್ಮೀ ಯೋಜನೆ ಬಾಂಡ್ ಪಾಲಿಕೆ ಆಸ್ಪತ್ರೆಯಲ್ಲಿ ಹುಟ್ಟಿದ ಹೆಣ್ಮಕ್ಕಳಿಗೆ 2019-20 ನೇ ಸಾಲಿನಲ್ಲಿ ಜನಿಸುವ ಹೆಣ್ಣುಮಕ್ಕಳಿಗೆ ಅನ್ವಯವಾಗುವಂತೆ 1 ಲಕ್ಷ ಮೌಲ್ಯದ 15 ವರ್ಷಾವಧಿಯ ಬಾಂಡ್ ಪಾಲಕೆ ವತಿಯಿಂದ ನೀಡಲಾಗುತ್ತದೆ. ಇದಕ್ಕಾಗಿ 60 ಕೋಟಿ ರೂ.ಅನುದಾನ ರೂಪಿಸಲಾಗಿದೆ ಎಂದರು.

ಪರಮ ಪೂಜ್ಯ ಸಿದ್ದಗಂಗಾ ಶ್ರೀಗಳ ಪುತ್ಥಳಿ ನಿರ್ಮಾಣ ಕಾರ್ಯಕ್ರಮಕ್ಕೆ 5 ಕೋಟಿ ಅನುದಾನ ಹಾಗು ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಬಗ್ಗೆ ಯೋಚನೆ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ.ಮಹಿಳೆಯರ ಆರ್ಥಿಕ ಸದೃಢತೆಗಾಗಿ ಕಿರು ಸಾಲ ಭಾಗ್ಯ.ಹೀಗೆ ಮುಂತಾದ ಜನಪರ ಯೋಜನೆಯನ್ನು ನೀಡಿದ್ದಾರೆ ಎಂದರು.

ಇಂತಹ ಜನಪರ ಬಜೆಟ್ ಮಂಡನೆ ಮಾಡುವ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಪೊರೇರ್ಟರ್‍ಗಳು ತಮ್ಮ ಜವಾಬ್ದಾರಿ ಮರೆತು ಅಗೌರವ ತೋರಿಸಿರುವುದನ್ನು ಖಂಡಿಸುತ್ತೇನೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ