
ಕೋಲಾರ, ಫೆ.19-ದೇಶದಲ್ಲಿ ಎಲ್ಲೂ ಇಲ್ಲದಂತಹ 370ನೆ ವಿಧಿ ಕಾನೂನು, ಜಮ್ಮು-ಕಾಶ್ಮೀರದಲ್ಲಿರುವುದರಿಂದಲೇ ನರಮೇಧದಂತಹ ಅನಾಹುತಕ್ಕೆ ಕಾರಣ. ಈ ವಿಧಿಯನ್ನು ರದ್ದು ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಕೋಲಾರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಬಿ.ಸುರೇಶ್ ತಿಳಿಸಿದರು.
ವರ್ತಕರು ಅಂಗಡಿಗಳನ್ನು ಬಂದ್ ಮಾಡಿ ನಗರದ ಗಾಂಧಿವನದಲ್ಲಿ ವೀರಮರಣ ಹೊಂದಿದ್ದ ಸಿಆರ್ಪಿಎಫ್ ಯೋಧರಿಗೆ ಶಾಂತಿಕೋರಿ ಎರಡು ನಿಮಿಷ ಮೌನಾಚರಣೆ ನಡೆಸಿ ಉಗ್ರಗಾಮಿಗಳ ಮತ್ತು ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿ ಮಾತನಾಡಿದರು.
ಉಗ್ರಗಾಮಿಗಳಿಗೆ ಸಹಾನುಭೂತಿ ತೋರಿಸಿ ತಮ್ಮಲ್ಲಿಯೇ ಆಶ್ರಯ ನೀಡುವವರ ಮತ್ತು ಪಾಕಿಸ್ತಾನ ಪರ ಘೋಷಣೆ ಕೂಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಹೇಳಿ ಭಾರತೀಯ ಸೇನೆಯ ಬಗ್ಗೆ ಅರಿವು ಮೂಡಿಸಲು ಪ್ರಾಥಮಿಕ ಶಿಕ್ಷಣದಿಂದಲೇ ಪಠ್ಯ ಪುಸ್ತಕಗಳಲ್ಲಿ ಪಾಠಗಳು ಬರಬೇಕು.ಅಲ್ಲದೆ ಪ್ರತಿ ಶಾಲಾ-ಕಾಲೇಜುಗಳಲ್ಲಿ ಎನ್ಸಿಸಿ ಕಡ್ಡಾಯವಾಗಬೇಕು.ಇದರಿಂದ ಸೇನೆಯ ಬಗ್ಗೆ ಅರಿವು ಮೂಡುವುದು ಎಂದರು.
ಸಮಾರಂಭದಲ್ಲಿ ವರ್ತಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಶ್ರೀಧರ್, ಎ.ಸಿ.ಚಲಪತಿ, ಮನೋಹರ್ ಮಾತನಾಡಿದರು.ನಂತರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೋಗಿ ಯೋಧರಿಗೆ ಜೈಕಾರ ಕೂಗಿಕೊಂಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.