ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು ನಾಗರಿಕ ಸಮಾಜದ ಕರ್ತವ್ಯ: ಶಾಸಕ ಎಸ್.ಟಿ.ಸೋಮಶೇಖರ್

ಯಶವಂತಪುರ, ಫೆ.17- ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು ನಾಗರಿಕ ಸಮಾಜದ ಕರ್ತವ್ಯ ಎಂದು ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎಸ್.ಟಿ.ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ತಾವರೆಕೆರೆ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ದೇಶದ ನಾಗರಿಕ ಸೇವೆಗೆ ಆಯ್ಕೆಯಾಗಿರುವ ತಾವರೆಕೆರೆ ಗ್ರಾಮದ ಜಾವೇದ್ ಪಾಷ ಹಾಗೂ ನಸೀಮಾ ಪುತ್ರಿ ಟಿ.ಜಿ.ನಾಜಿಯಾ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.

ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಬಡ ಮುಸ್ಲಿಂ ಕುಟುಂಬದ ಯುವತಿ ಐಎಎಸ್ ಪೂರ್ಣಗೊಳಿಸಿರುವುದು ಮಹತ್ತರ ಸಾಧನೆ. ಬಡತನದ ಬವಣೆಯನ್ನು ಮೆಟ್ಟಿನಿಂತು ದೃಢ ಸಂಕಲ್ಪ, ಸತತ ಪರಿಶ್ರಮ, ಬದ್ಧತೆಯಿಂದ ದೇಶದ ನಾಗರಿಕ ಸೇವೆಗೆ ಆಯ್ಕೆಯಾಗಿರುವ ನಾಜಿಯಾ ತಳ ಸಮುದಾಯಗಳ ಶ್ರೇಯೋಭಿವೃದ್ದಿಗೆ ಶ್ರಮಿಸುವ ಮೂಲಕ ಹೆಣ್ಣು ಮಕ್ಕಳಿಗೆ ಮಾದರಿಯಾಗಲಿ ಎಂದು ಆಶಿಸಿದರು
ಜಿಲ್ಲಾ ಪಂಚಾಯತಿ ಸದಸ್ಯ ಟಿ.ಜಿ.ನರಸಿಂಹಮೂರ್ತಿ ಮಾತನಾಡಿ, ಬಡ ಕುಟುಂಬದ ಹೆಣ್ಣು ಮಗಳು ಐಎಎಸ್ ಆಗಿರುವುದು ನಮ್ಮ ಗ್ರಾಮಕ್ಕೆ ಹೆಮ್ಮೆಯ ವಿಷಯ ಎಂದರು.

ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತ ವಿದ್ಯಾಸಂಸ್ಕಾರ್ ವಿದ್ಯಾಸಂಸ್ಥೆಯ ನಿರ್ದೇಶಕ ರಾಮಸ್ವಾಮಿ, ಐಪಿಎಸ್ ಅಧಿಕಾರಿ ರವಿ ಚನ್ನಣ್ಣವರ್ ಅವರಿಗೆ ಚಿರ ಋಣಿಯಾಗಿರುತ್ತೇನೆ. ಸರ್ವರೂ ಮೆಚ್ಚುವಂತೆ ಜನ ಸೇವೆ ಮಾಡುತ್ತೇನೆ ಎಂದ ನಾಜಿಯಾ.

ಅಭಿನಂದನಾ ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರ್ ಸಿದ್ದರಾಜು, ಪಿಡಿಒ ಜೇಮ್ಸ, ಮುಖಂಡರಾದ ಕೆಂಪೇಗೌಡ, ಮಂಜುನಾಥ್, ನಾರಾಯಣ್, ಸಿದ್ದರಾಜು, ಆನಂದ್, ಅಹಮದ್ ಖಾನ್, ರಾಮಚಂದ್ರೇಗೌಡ ಮತ್ತಿತರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ