ಮಹಾರಾಷ್ಟ್ರ, ಫೆ.16- ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಸಿಆರ್ಪಿಎಫ್ನ 40 ಸಿಬ್ಬಂದಿಯ ಮಹಾತ್ಯಾಗ ನಿರರ್ಥಕವಾಗಲು ಬಿಡುವುದಿಲ್ಲ ಎಂದು ಪುನರುಚ್ಛರಿಸಿರುವ ಪ್ರಧಾನಿ ನರೇಂದ್ರ ಮೋದಿ ದಾಳಿಕೋರರನ್ನು ಶಿಕ್ಷಿಸಲು ಭದ್ರತಾ ಪಡೆಗಳಿಗೆ ಪೂರ್ಣ ಅಧಿಕಾರ ಮತ್ತು ಮುಕ್ತ ಸ್ವಾತಂತ್ರ ನೀಡಲಾಗಿದೆ ಎಂದು ಘೋಷಿಸಿದ್ದಾರೆ.
ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯ ಪುಂಧರ್ಕಾವಾಡದಲ್ಲಿ ಇಂದು ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ತಪ್ಪಿತಸ್ಥರನ್ನು ಸುಮ್ಮನೇ ಬಿಡುವ ಪ್ರಶ್ನೆಯೇ ಇಲ್ಲ. ಈ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಘರ್ಜಿಸಿದರು.
ಪುಲ್ಮಾಮಾ ದಾಳಿ ನಡೆದ 24 ತಾಸುಗಳಲ್ಲಿ ಇದು ಪ್ರಧಾನಿ ಪಾಕಿಸ್ತಾನಕ್ಕೆ ನೀಡಿರುವ ಮೂರನೇ ಕಟು ಎಚ್ಚರಿಕೆಯಾಗಿದೆ.
ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಆರ್ಥಿಕವಾಗಿ ದಿವಾಳಿಯತ್ತ ಸಾಗಿರುವ ಆ ದೇಶ ಈಗ ಭಯೋತ್ಪಾದನೆಯ ಅನ್ವರ್ಥನಾಮವಾಗಿದೆ ಎಂದು ಕಟುವಾಗಿ ಟೀಕಿಸಿದರು.
ಭಾರತೀಯ ಆಕ್ರೋಶ ನನಗೆ ಅರ್ಥವಾಗುತ್ತದೆ. ಪುಲ್ಮಾಮಾ ಹುತಾತ್ಮರ ತ್ಯಾಗ ನಿರರ್ಥಕವಾಗುವುದಿಲ್ಲ. ಉಗ್ರಗಾಮಿ ಸಂಘಟನೆಗಳು ಮತ್ತು ಉಗ್ರರು ಬಚ್ಚಿಟ್ಟುಕೊಳ್ಳಲು ಯತ್ನಿಸಿದರೂ ನಾವು ಅವರನ್ನು ಹೊರಗೆ ಎಳೆದು ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಪ್ರಧಾನಿ ಗುಡುಗಿದರು.
ಇಡೀ ದೇಶದ ಜನರು ಹುತ್ಮಾತರಿಗೆ ಕಂಬಿನಿ ಮಿಡಿದಿದ್ದಾರೆ. ಅವರ ಮಹಾತಾಗ್ಯವನ್ನು ಸ್ಮರಿಸಿದ್ದಾರೆ. ಯೋಧರ ಮಾರಣಹೋಮ ನಡೆಸಿದ ದಾಳಿಕೋರರನ್ನು ಶಿಕ್ಷಿಸದೇ ಸುಮ್ಮನೇ ಕೂರುವುದಿಲ್ಲ ಎಂದು ಅವರು ಹೇಳಿದರು.