ಜೆಇಎಂ ಉಗ್ರಗಾಮಿ ಸಂಘಟನೆಗೆ ಅಮೆರಿಕಾದಿಂದ ಕೊಡಲಿ ಪೆಟ್ಟು

ವಾಷಿಂಗ್ಟನ್, ಫೆ.16- ಪುಲ್ವಾಮಾದಲ್ಲಿ ಅಟ್ಟಹಾಸ ಮೆರೆದು ಭಾರತೀಯ ಯೋಧರ ಮಾರಣಹೋಮ ಮಾಡಿದ ಜೈಷ್-ಎ-ಮಹಮದ್(ಜೆಇಎಂ) ಉಗ್ರಗಾಮಿ ಸಂಘಟನೆಗೆ ಕೊಡಲಿ ಪೆಟ್ಟು ನೀಡಲು ಅಮೆರಿಕ ಮುಂದಾಗಿದೆ. ಈ ನಿಟ್ಟಿನಲ್ಲಿ ಜೈಷ್ ಉಗ್ರರಿಗೆ ಬೆಂಬಲ ನೀಡುವ ಭಯೋತ್ಪಾದನೆ ಬಣಗಳ ಹಣಕಾಸು ಮತ್ತು ಆಸ್ತಿಗಳನ್ನು ಕೂಡಲೇ ಮುಟ್ಟುಗೋಲು ಹಾಕುವಂತೆ ಅಮೆರಿಕ ಪಾಕಿಸ್ತಾನಕ್ಕೆ ಸ್ಪಷ್ಟ ತಾಕೀತು ಮಾಡಿದೆ.

ಜೈಷ್ ಉಗ್ರರ ಭವಿಷ್ಯದ ದಾಳಿಗಳನ್ನು ತಡೆಗಟ್ಟಲು ಭಾರತಕ್ಕೆ ಪೂರ್ಣ ಪ್ರಮಾಣದ ಸಹಕಾರ ನೀಡುವುದಾಗಿ ಅಮೆರಿಕ ಘೋಷಿಸಿದೆ.

ವಿಶ್ವಸಂಸ್ಥೆಯಿಂದ ಘೋಷಿಸಲಾದ ಭಯೋತ್ಪಾದಕ ಬಣಗಳು, ಉಗ್ರರ ಜಾಲಗಳು ಮತ್ತು ಅವರು ನಾಯಕರ ಹಣಕಾಸು ಮತ್ತು ಆಸ್ತಿ-ಪಾಸ್ತಿಗಳನ್ನು ತಕ್ಷಣ ಜಪ್ತಿ ಮಡುವಂತೆ ವಿದೇಶಾಂಗ ಇಲಾಖೆ ಇಸ್ಲಾಮಾಬಾದ್‍ಗೆ ತಿಳಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರರು, ಪಾಕಿಸ್ತಾನ 2002ರಲ್ಲಿ ಜೈಷ್ ಉಗ್ರಗಾಮಿ ಬಣವನ್ನು ನಿಷೇಧಿಸಿದ್ದರೂ. ಅದು ಆ ದೇಶದಲ್ಲಿ ಈಗಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂಘಟನೆಗೆ ಬೆಂಬಲ ಮತ್ತು ಸಹಕಾರ ನೀಡುವ ಎಲ್ಲ ಭಯೋತ್ಪಾದಕ ಗುಂಪುಗಳು ಮತ್ತು ಉಗ್ರ ನಾಯಕರ ಆಸ್ತಿ-ಪಾಸ್ತಿ ಮತ್ತು ಹಣಕಾಸನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಭಾರತಕ್ಕೆ 70 ಸಂಸದರ ಬೆಂಬಲ : ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕರ ಹೇಯ ಕೃತ್ಯವನ್ನು ಖಂಡಿಸಿರುವ 15 ಸೆನೆಟರ್‍ಗಳೂ ಸೇರಿದಂತೆ 70ಕ್ಕೂ ಹೆಚ್ಚು ಸಂಸದರು, ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಭಾರತಕ್ಕೆ ಬೆಂಬಲ ಘೋಷಿಸಿದ್ದಾರೆ.

ಪುಲ್ವಾಮಾದಂಥ ಹೀನ ಕೃತ್ಯಗಳು ಭಾರತೀಯ ಸಂಕಲ್ಪವನ್ನು ದುರ್ಬಲಗೊಳಿಸುವುದಿಲ್ಲ. ನಾವು ಉಗ್ರರ ನಿಗ್ರಹ ಹೋರಾಟಕ್ಕೆ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಸಂಸದರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ