ನವದೆಹಲಿ,ಫೆ.16- ರಿಯಾಲಿಟಿ ಶೋ ದಿ ಕಪಿಲ್ ಶರ್ಮಾ ಶೋನಲ್ಲಿ ಹಾಸ್ಯ ಚಟಾಕಿ ಹಾರಿಸುವ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಈಗ ಮತ್ತೆ ವಿವಾದಕ್ಕೆ ಸಿಲುಕಿದ್ದು, ಭಾರತೀಯರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಪುಲ್ವಾಮಾ ಉಗ್ರ ದಾಳಿ ಬಗ್ಗೆ ಸಿಧು ನೀಡಿದ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದಿ ಕಪಿಲ್ ಶರ್ಮಾ ಶೋ ಬ್ಯಾನ್ ಮಾಡಿ ಎಂದು ನೆಟ್ಟಿಗರು ಪಟ್ಟು ಹಿಡಿದಿದ್ದಾರೆ.
ಉಗ್ರರ ಕೃತ್ಯವನ್ನು ಖಂಡಿಸಿದ್ದರೂ ಇದಕ್ಕೆ ಯುದ್ಧ ಪರಿಹಾರವಲ್ಲ ಎಂದು ಸಿದ್ದು ಹೇಳಿಕೆ ನೀಡಿದ್ದರು. ಅಲ್ಲದೆ ಭಾರತ-ಪಾಕಿಸ್ತಾನ ಕುಳಿತು ಮಾತುಕತೆಯ ಮೂಲಕ ಉಗ್ರ ವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದಿದ್ದರು.
ಇಂತಹ ಸಮಯದಲ್ಲೂ ಪಾಕ್ ಪ್ರೇಮ ಮೆರೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇಷ್ಟಾದ ಮೇಲೂ ಮಾತುಕತೆ ಮೂಲಕ ಪರಿಹರಿಸಿ ಎಂಬುದು ಮೂರ್ಖತನ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಸಿಧು ಪಾಕಿಸ್ಥಾನಕ್ಕೆ ಭೇಟಿ ಕೊಟ್ಟು ಅಲ್ಲಿನ ಸೇನಾ ಮುಖ್ಯಸ್ಥನನ್ನ ಬಿಗಿದಪ್ಪಿದ್ದನ್ನ ಮುಂದಿಟ್ಟುಕೊಂಡು ಸಿಧು ದೇಶದ್ರೋಹಿ ಅಂತಾ ಕಿಡಿಕಾರ್ತಿದ್ದಾರೆ. ಹಾಗಾಗಿ, ಸಿಧು ಕಾಣಿಸಿಕೊಂಡು ಕವಿತೆಗಳ ಸರಮಾಲೆ ಹರಿಸುವ ಕಪಿಲ್ ಶರ್ಮಾ ಶೋ ಬ್ಯಾನ್ ಆಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.