ತುಮಕೂರು ಮೂಲದ ಉದ್ಯಮಿಯನ್ನು ಬಂಧಿಸಿದ ಅದಾಯ ತೆರಿಗೆ ಇಲಾಖೆ

ಬೆಂಗಳೂರು, ಫೆ.16-ತೆರಿಗೆ ವಂಚಕರು ಮತ್ತು ಸುಸ್ತಿದಾರರ ವಿರುದ್ಧ ಕಠಿಣ ಕ್ರಮ ಮುಂದುವರಿಸಿರುವ ಆದಾಯ ತೆರಿಗೆ ಇಲಾಖೆ 7.35 ಕೋಟಿ ರೂ.ಗಳ ತೆರಿಗೆ ವಂಚನೆ ಪ್ರಕರಣ ಸಂಬಂಧ ತುಮಕೂರು ಮೂಲದ ಉದ್ಯಮಿಯೊಬ್ಬರನ್ನು ಬಂಧಿಸಿದೆ.

ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಇಲಾಖೆ ವಿರುದ್ಧ ಮೇಲ್ಮನವಿ ಸಲ್ಲಿಸಿ ವಿಫಲರಾಗಿದ್ದರೂ ಕೂಡ ಈ ಉದ್ಯಮಿ 7.35 ಕೋಟಿ ರೂ.ಗಳ ತೆರಿಗೆ ಬಾಕಿ ಮತ್ತು ಬಡ್ಡಿ ಮೊತ್ತವನ್ನು ಪಾವತಿಸದೆ ನ್ಯಾಯಾಲಯದ ಆದೇಶವನ್ನು ಕಡೆಗಣಿಸಿದ್ದರು.

ಈ ಪ್ರಕರಣ ಸಂಬಂಧ ಇವರಿಗೆ 17 ಬಾರಿ ಇಲಾಖೆ ವತಿಯಿಂದ ಬಾಕಿ ಹಣ ಪಾವತಿಸುವಂತೆ ಮನವಿ ಮಾಡಲಾಗಿತ್ತು.ಆದರೂ ಇವರು ಈ ನೋಟಿಸ್‍ಗಳನ್ನು ನಿರ್ಲಕ್ಷಿಸಿ ತೆರಿಗೆ ಹಣ ಮರುಪಾವತಿಸದೆ ವಂಚಿಸಿದ್ದ ಆರೋಪದ ಮೇಲೆ ಅವರನ್ನು ನಿನ್ನೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ತೆರಿಗೆ ವಸೂಲಿ ಅಧಿಕಾರಿಗಳು ಆರೋಪಿ ಉದ್ಯಮಿ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿಗಳನ್ನು ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಅವರು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗೆ ಮನವಿ ಸಲ್ಲಿಸಿ ವಿಫಲರಾಗಿದ್ದರು.

ಮತ್ತೊಂದು ಪ್ರಕರಣದಲ್ಲಿ ತೆರಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ಮತ್ತೊಬ್ಬ ಸುಸ್ತಿದಾರನನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಐಟಿ ಅಧಿಕಾರಿಗಳು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ತೆರಿಗೆ ವಂಚಕರು ಮತ್ತು ಸುಸ್ತಿದಾರರ ವಿರುದ್ಧ ಮತ್ತಷ್ಟು ಕಠಿಣ ಕ್ರಮಗಳು ಮುಂದುವರಿಯಲಿವೆ ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ