ಫೆ.20ರ ನಂತರ ಸರ್ಕಾರಿ ನೌಕರರನ್ನು ವರ್ಗಾವಣೆ ಅಥವಾ ನಿಯೋಜನೆ ಮಾಡುವಂತಿಲ್ಲ: ಕೇಂದ್ರ ಚುನಾವಣಾ ಆಯೋಗದಿಂದ ರಾಜ್ಯ ಸರ್ಕಾರಕ್ಕೆ ಸೂಚನೆ

ಬೆಂಗಳೂರು,ಫೆ.16-ಯಾವುದೇ ಕಾರಣಕ್ಕೂ ಈ ತಿಂಗಳ 20 (ಬುಧವಾರ)ರ ನಂತರ ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡುವುದು ಇಲ್ಲವೇ ನಿಯೋಜನೆ ಸೇರಿದಂತೆ ಹೊಸದಾಗಿ ನೇಮಕಾತಿಗೆ ಆದೇಶ ಹೊರಡಿಸದಂತೆ ಕೇಂದ್ರ ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ ಸೂಚನೆ ಕೊಟ್ಟಿದೆ.

ಈ ಸಂಬಂಧ ಕೇಂದ್ರ ಚುನಾವಣಾ ಆಯೋಗದ ಪ್ರಧಾನ ಕಾರ್ಯದರ್ಶಿ ನರೇಂದ್ರ .ಎನ್ ಬುಟಲಿಯಾ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್‍ಗೆ ಪತ್ರ ಬರೆದಿದ್ದಾರೆ.

ಈ ತಿಂಗಳ 20ರೊಳಗೆ ಸರ್ಕಾರಿ ನೌಕರರನ್ನು ವರ್ಗಾವಣೆ ಗೊಳಿಸುವುದು, ಹೆಚ್ಚುವರಿಯಾಗಿ ನಿಯೋಜನೆ, ಹೊಸದಾಗಿ ನೇಮಕ ಮಾಡಿಕೊಳ್ಳುವುದು ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಬೇಕೆಂದು ಸೂಚಿಸಿದ್ದಾರೆ.

ಈ ಮೂಲಕ ಲೋಕಸಭೆ ಚುನಾವಣೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಪರೋಕ್ಷವಾಗಿ ಸಲಹೆ ಮಾಡಿದ್ದಾರೆ. ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಚುನಾವಣಾಧಿಕಾರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರತ್ಯೇಕವಾಗಿ ಪತ್ರ ಬರೆದಿರುವ ನರೇಂದ್ರ .ಎನ್ ಬುಟಲಿಯಾ, ಮಾರ್ಚ್ ತಿಂಗಳಿನಲ್ಲಿ ಬಹುತೇಕ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ ಎಂಬ ಸುಳಿವು ನೀಡಿದ್ದಾರೆ.

ಎತ್ತಂಗಡಿ ಮಾಡಿ:
ಹಿರಿಯ ಅಧಿಕಾರಿಯಿಂದ ಹಿಡಿದು ಒಂದೇ ಸ್ಥಳದಲ್ಲಿ ನಾಲ್ಕು ವರ್ಷ ಕಾರ್ಯ ನಿರ್ವಹಿಸಿದ್ದರೆ ಅಂತಹ ಅಧಿಕಾರಿಯನ್ನು ಕೂಡಲೇ ಬೇರೊಂದು ಸ್ಥಳಕ್ಕೆ ವರ್ಗಾವಣೆ ಮಾಡಬೇಕು.ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟ ಇಲಾಖಾ ಸಚಿವರ ಗಮನಕ್ಕೆ ತರಬೇಕೆಂದು ಸೂಚಿಸಲಾಗಿದೆ.

ಸತತವಾಗಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸಿರುವ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರದ ಗಮನಕ್ಕೆ ತರುವುದು ನಿಮ್ಮ ಕರ್ತವ್ಯ . ನೀತಿ ಸಂಹಿತೆ ಜಾರಿಯಾಗುವ ಮೊದಲೇ ಸರ್ಕಾರ ವರ್ಗಾವಣೆ ಮಾಡದಿದ್ದರೆ ನಂತರ ಆಯೋಗವೇ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಐಎಎಸ್, ಐಎಫ್‍ಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಯಾರೊಬ್ಬರನ್ನು ವರ್ಗಾವಣೆ ಮಾಡಬಾರದು. ಜಿಲ್ಲಾಧಿಕಾರಿಗಳು, ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು , ಸಹಾಯಕ ಆಯುಕ್ತರು, ಎಎಸ್‍ಪಿ, ಡಿವೈಎಸ್ಪಿ, ಸಬ್‍ರಿಜಿಸ್ಟ್ರಾರ್, ತಹಸೀಲ್ದಾರ್, ಸರ್ಕಲ್ ಇನ್‍ಸ್ಪೆಕ್ಟರ್, ಸಬ್‍ಇನ್‍ಸ್ಪೆಕ್ಟರ್, ಪಿಡಿಒ, ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಸೇರಿದಂತೆ ಇನ್ನಿತರ ಅಧಿಕಾರಿಗಳ ವರ್ಗಾವಣೆಗೆ ಕಡಿವಾಣ ಹಾಕುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.
ಸೋಮವಾರ ಸಭೆ: ಕೇಂದ್ರ ಚುನಾವಣಾ ಆಯೋಗ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಜಿಲ್ಲಾಧಿಕಾರಿಗಳು, ಸಿಇಓ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಲೋಕಸಭೆ ಚುನಾವಣೆಗೆ ಕೈಗೊಳ್ಳಬೇಕಾದ ಪೂರ್ವ ಸಿದ್ಧತೆಗಳ ಬಗ್ಗೆ ಸಲಹೆಗಳನ್ನು ನೀಡಲಿದ್ದಾರೆ.

ಇನ್ನಷ್ಟು ವಿಳಂಬ:
ಹೊಸದಾಗಿ ನೇಮಕಾತಿ ಆದೇಶ ಮಾಡಬಾರದು ಎಂದು ಚುನಾವಣಾ ಆಯೋಗ ಸೂಚಿಸಿರುವ ಹಿನ್ನೆಲೆಯಲ್ಲಿ ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕಾತಿ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಜೆಡಿಎಸ್‍ನಲ್ಲಿ ಬಾಕಿ ಇದ್ದ ಕೆಲವು ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿ ತೀರ್ಮಾನಿಸಿದ್ದರು.

ಅಸಮಾಧಾನಗೊಂಡಿರುವ ಶಾಸಕರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ಕಲ್ಪಿಸುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಯಾವುದೇ ರೀತಿಯ ಭಿನ್ನಮತಕ್ಕೆ ಅವಕಾಶವಿಲ್ಲದಂತೆ ಒಗ್ಗಟ್ಟಿನ ಮೂಲಕ ಹೆಚ್ಚು ಸ್ಥಾನ ಗಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿತ್ತು.

ಈಗ ಚುನಾವಣಾ ಆಯೋಗವೇ ಇದಕ್ಕೆ ಬ್ರೇಕ್ ಹಾಕಿರುವುದರಿಂದ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಶಾಸಕರ ಕನಸು ಭಗ್ನಗೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ