ಬೆಂಗಳೂರು,ಫೆ.16- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹತ್ವದ ಬಜೆಟ್ ಇದೇ 18ರ ಸೋಮವಾರದಂದು ಮಂಡನೆಯಾಗಲಿದೆ.
ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಅವರು ಬಜೆಟ್ ಮಂಡಿಸುತ್ತಿದ್ದು, ಇದೇ ಮೊದಲ ಬಾರಿಗೆ ಮಹಿಳಾ ಸದಸ್ಯರೊಬ್ಬರು ಬಜೆಟ್ ಮಂಡಿಸುತ್ತಿರುವುದು ವಿಶೇಷವಾಗಿದೆ.
ಬಜೆಟ್ ಗಾತ್ರ ಸುಮಾರು 12 ಸಾವಿರ ಕೋಟಿ ತಲುಪುವ ನಿರೀಕ್ಷೆಯಿದ್ದು, ಈ ಬಾರಿ ಬಜೆಟ್ನಲ್ಲಿ ನಗರದ ಮಹಿಳೆಯರಿಗೆ ಹಲವು ಹೊಸ ಯೋಜನೆಗಳು ಘೋಷಣೆಯಾಗುವ ಸಾಧ್ಯತೆ ಇದೆ.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಮ್ಯ ಶಿವಕುಮಾರ್ ಅವರು ಮಹಿಳಾ ಪರವಾದ ಹಲವು ಕಲ್ಯಾಣ ಯೋಜನೆಗಳನ್ನು ಕುರಿತು ಸಲಹೆ ನೀಡಿದ್ದು, ಸ್ವಯಂ ಉದ್ಯೋಗಿ ಮಹಿಳೆಯರಿಗೆ ಎಲೆಕ್ಟ್ರಿಕ್ ಮೊಪೈಡ್ ನೀಡುವಂತೆ ಮನವಿ ಮಾಡಿದ್ದಾರೆ.
ನಿರುದ್ಯೋಗಿ ಯುವಕರಿಗೆ ಈಗಾಗಲೇ ಸೈಕಲ್ ವಿತರಣೆ ಮಾಡಲಾಗುತ್ತಿದೆ. ಆದರೆ ಈ ಯೋಜನೆಗೆ ಯಾರೊಬ್ಬರೂ ಅರ್ಜಿ ಸಲ್ಲಿಸುತ್ತಿಲ್ಲ. ಇದೇ ರೀತಿ ಸಾಕಷ್ಟು ಯೋಜನೆಗಳು ಸಮರ್ಪಕ ಅನುಷ್ಠಾನವಿಲ್ಲದೆ, ಸರಿಯಾದ ಯೋಜನೆ ಇಲ್ಲದೆ ವ್ಯರ್ಥವಾಗುತ್ತಿದೆ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಅವರಿಗೆ ವಿವರಿಸಿದ್ದಾರೆ.
ನಗರದಲ್ಲಿ ಸ್ತ್ರೀಶಕ್ತಿ ಸಂಘಗಳ ಸದಸ್ಯರು, ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳೆಯರು ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ.ಕ್ಯಾಂಡಲ್ ತಯಾರಿಕೆ, ಬುಟ್ಟಿ ಹೆಣೆಯುವುದು ಸೇರಿದಂತೆ ಅನೇಕ ಗುಡಿಕೈಗಾರಿಕೆಗಳನ್ನು ರೂಢಿಸಿಕೊಂಡಿದ್ದಾರೆ.
ಇವರಿಗೆ ಎಲೆಕ್ಟ್ರಿಕ್ ಮೊಪೈಡ್ಗಳನ್ನು ನೀಡಿದರೆ ಅವರಿಗೆ ಸಹಾಯವಾಗುತ್ತದೆ. ಪ್ರತಿ ವಾರ್ಡ್ನಲ್ಲಿ 20 ಮಂದಿ ಸ್ವಯಂ ಉದ್ಯೋಗಿಗಳನ್ನು ಗುರುತಿಸಿ ಅವರಿಗೆ ಪಿಂಕ್ ಬಣ್ಣದ ಮೊಪೈಡ್ಗಳನ್ನು ನೀಡಿದರೆ ಅನುಕೂಲವಾಗುತ್ತದೆ.ಇದಕ್ಕಾಗಿ ತಗಲುವ ವೆಚ್ಚ 15 ಕೋಟಿ ರೂ.ಎಂದು ಸಲಹೆ ನೀಡಿದ್ದಾರೆ.
ಪ್ರತಿ ವರ್ಷ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ನೂರಾರು ಕೋಟಿ ರೂ.ಗಳ ಯೋಜನೆಗಳನ್ನು ಘೋಷಣೆ ಮಾಡಲಾಗುತ್ತದೆ.ಆದರೆ ಕೆಲವು ಅನುಷ್ಠಾನಕ್ಕೆ ಬರದೆ ಬರೀ ಘೋಷಣೆಗಳಾಗಿಯೇ ಉಳಿದಿವೆ. ಹಾಗಾಗಿ ಈ ಬಾರಿ ಮಹಿಳೆಯರಿಗೆ ವಿನೂತನ ಯೋಜನೆಗಳನ್ನು ಘೋಷಿಸುವಂತೆ ಮನವಿ ಮಾಡಿದ್ದಾರೆ.
ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಅವರು ಈ ಸಲಹೆಯನ್ನು ಪುರಸ್ಕರಿಸಿದ್ದೇ ಆದಲ್ಲಿ ನಗರದ ಸ್ವಯಂ ಉದ್ಯೋಗಿ ಮಹಿಳೆಯರಿಗೆ ಬೈಕ್ ಭಾಗ್ಯ ಸಿಗುವಲ್ಲಿ ಅನುಮಾನವಿಲ್ಲ.