ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯನ್ನು ಯಾವುದೇ ಲೋಪವಿಲ್ಲದೆ ನಡೆಸಬೇಕು: ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಫೆ.16- ಮುಂದಿನ ತಿಂಗಳಿನಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯನ್ನು ಅತ್ಯಂತ ವ್ಯವಸ್ಥಿತವಾಗಿ ಯಾವುದೇ ಲೋಪವಿಲ್ಲದೆ ನಡೆಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಗೃಹ ಇಲಾಖೆಯ ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಿದ ಅವರು, ಪೋಷಕರು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪರೀಕ್ಷೆಯನ್ನು ಆಯೋಜಿಸಬೇಕು. ಪ್ರಶ್ನೆ ಪತ್ರಿಕೆ ಬಹಿರಂಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಹಿಂದೆ ಪ್ರಶ್ನೆ ಪತ್ರಿಕೆ ಬಹಿರಂಗದಲ್ಲಿ ಭಾಗಿಯಾಗಿದ್ದ ಆರೋಪಿಗಳ ಮೇಲೆ ತೀವ್ರ ನಿಗಾ ಇರಿಸಬೇಕೆಂದು ತಾಕೀತು ಮಾಡಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾರ್ಚ್ 1ರಿಂದ ಹಾಗೂ ಪಿಯುಸಿ ಪರೀಕ್ಷೆ ಮಾರ್ಚ್ 21ರಿಂದ ಆರಂಭವಾಗಲಿದ್ದು, ಎಸ್ಸೆಸ್ಸೆಲ್ಸಿಯಲ್ಲಿ 8.45 ಲಕ್ಷ ವಿದ್ಯಾರ್ಥಿಗಳು, ಪಿಯುಸಿಯಲ್ಲಿ 6.75 ಲಕ್ಷ ವಿದ್ಯಾರ್ಥಿಗಳು ಸೇರಿ ಒಟ್ಟು 15.5ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಈ ಹಿಂದಿನ ವರ್ಷಗಳಲ್ಲಿ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡಿದ್ದು, ಮೌಲ್ಯಮಾಪನ ಸಂದರ್ಭದಲ್ಲೂ ಪ್ರತಿಭಟನೆಗಳಾಗಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದಕ್ಕೆ ಅವಕಾಶ ನೀಡದಂತೆ ಈ ಬಾರಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಿಎಂ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಸಿ.ಜಾಫರ್ ಅವರು, 2016ರಿಂದ ಜಾರಿಯಲ್ಲಿರುವ ಕರ್ನಾಟಕ ಸೆಕ್ಯೂರ್ ಎಕ್ಸಾಮಿನೇಷನ್ ಸಿಸ್ಟಮ್‍ನನ್ನು ಈ ವರ್ಷವೂ ಮುಂದುವರೆಸಲಾಗುತ್ತಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಸಿಸಿ ಟಿವಿ ಅಳವಡಿಸಲಾಗುತ್ತಿದೆ.ಪ್ರಶ್ನೆ ಪತ್ರಿಕೆ ಸಾಗಾಟಕ್ಕೆ ಸಂಬಂಧಪಟ್ಟಂತೆ ಕಂದಾಯ ಇಲಾಖೆ, ಖಜಾನೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಬಳಸಿಕೊಳ್ಳಲಾಗುವುದು. ಆಯಾ ಜಿಲ್ಲಾಧಿಕಾರಿಗಳು ಎಷ್ಟು ಮಂದಿ ಹಾಗೂ ಯಾವ ಅಧಿಕಾರಿಗಳನ್ನು ಬಳಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತಾರೆ ಎಂದರು.

ಈ ಮೊದಲು ಪ್ರಶ್ನೆ ಪತ್ರಿಕೆ ಬಹಿರಂಗಗೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲವು ಆರೋಪಿಗಳನ್ನು ಬಂಧಿಸಲಾಗಿದ್ದು, ಅಂತಹವರ ಮೇಲೆ ನಿಗಾ ಇಡಲು ಗೃಹ ಇಲಾಖೆಗೆ ಸೂಚಿಸಲಾಗಿದೆ.ಹಿಂದಿನ ಅನುಭವವನ್ನು ಆಧರಿಸಿ ಮುಂದಿನ ದಿನಗಳಲ್ಲಿ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು. ಮೌಲ್ಯಮಾಪನವನ್ನು ಬಹಿಷ್ಕರಿಸುವುದಾಗಿ ಉಪನ್ಯಾಸಕರ ಸಂಘಟನೆ ಹೇಳುತ್ತಿದೆ. ಅವರ ಜತೆ ಈಗಾಗಲೇ ಚರ್ಚೆ ಮಾಡಿದ್ದೇವೆ. ಯಾವುದೇ ಗೊಂದಲಗಳಿಲ್ಲ. ಪ್ರತಿಭಟನೆ ನಡೆಸದೆ ಮೌಲ್ಯಮಾಪನ ನಡೆಸುತ್ತಾರೆ ಎಂಬ ನಿರೀಕ್ಷೆಗಳಿವೆ. ಒಂದು ವೇಳೆ ಪ್ರತಿಭಟನೆ ನಡೆಸಿದರೂ ಮೌಲ್ಯಮಾಪನ ನಡೆಯುತ್ತದೆ. ಈ ಹಿಂದೆಲ್ಲಾ ಮೌಲ್ಯಮಾಪನ ಸುಲಲಿತವಾಗಿ ನಡೆದಿದೆ.ಈ ವರ್ಷವೂ ಅದೇ ರೀತಿ ನಡೆಯಲಿದೆ ಎಂದು ಹೇಳಿದರು.

ಲೋಕಸಭೆ ಚುನಾವಣೆಗೂ ಮುನ್ನ ಫಲಿತಾಂಶ ಪ್ರಕಟಿಸುವ ನಿರೀಕ್ಷೆ ಇದೆ.ಇಲಾಖೆಯ ಅಂದಾಜಿನ ಪ್ರಕಾರ ಮಾ.25ರೊಳಗೆ ಎಸ್ಸೆಸ್ಸೆಲ್ಸಿ, ಏ.18ರೊಳಗೆ ಪಿಯುಸಿ ಫಲಿತಾಂಶ ಪ್ರಕಟಗೊಳ್ಳಬಹುದಾಗಿದೆ ಎಂದು ತಿಳಿಸಿದರು.

ಕಳೆದ ವರ್ಷ ಮೌಲ್ಯಮಾಪಕರು ಮತ್ತು ಪರೀಕ್ಷಾ ಕರ್ತವ್ಯ ಸಿಬ್ಬಂದಿಗಳಿಗೆ ಶೇ.30ರಷ್ಟು ಗೌರವಧನ ಹೆಚ್ಚಿಸಿರುವುದರಿಂದ ಈ ಬಾರಿ ಹೆಚ್ಚಳ ಮಾಡುವ ಸಾಧ್ಯತೆಗಳಿಲ್ಲ ಎಂದು ಹೇಳಿದರು.

ಕಳೆದ ವರ್ಷದಿಂದಲೂ ಎಸ್ಸೆಸ್ಸೆಲ್ಸಿ ಪ್ರವೇಶ ಪತ್ರವನ್ನು ಆನ್‍ಲೈನ್‍ನಲ್ಲಿ ನೀಡಲಾಗುತ್ತಿದೆ.ಈ ವರ್ಷದಿಂದ ಪಿಯುಸಿಗೂ ಆನ್‍ಲೈನ್ ಮೂಲಕ ಪ್ರವೇಶ ಪತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ.ಇದೇ ಮೊದಲ ಬಾರಿಗೆ ಮೌಲ್ಯಮಾಪನ ಕೇಂದ್ರದಲ್ಲಿ ವಿದ್ಯಾರ್ಥಿಗಳಿಸಿದ ಅಂಕವನ್ನು ಆನ್‍ಲೈನ್‍ನಲ್ಲಿ ನಮೂದಿಸಲಾಗುತ್ತದೆ. ಇದು ಡಿಜಿಟಲ್ ಲಾಕರ್ ವ್ಯವಸ್ಥೆ ಹೊಂದಿದ್ದು, ಬೇರೆ ಯಾರಿಗೂ ಅಂಕಗಳು ಕಾಣ ಸಿಗುವುದಿಲ್ಲ. ಫಲಿತಾಂಶದ ದಿನದವರೆಗೂ ಅದನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬಂದು ನಂತರ ಬಹಿರಂಗಗೊಳಿಸಲಾಗುವುದು.ಪ್ರಶ್ನೆ ಪತ್ರಿಕೆಯನ್ನು ಸಾಗಾಣಿಕೆ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ