![dis](http://kannada.vartamitra.com/wp-content/uploads/2019/02/dis-298x381.jpg)
ಬೆಂಗಳೂರು, ಫೆ.15-ಭದ್ರತಾ ವಿಚಾರದಲ್ಲಿ ರಾಜೀ ಆಗದೆ ದೇಶದ ರಕ್ಷಣೆಗೆ ಆದ್ಯತೆ ನೀಡಬೇಕು, ಈ ಬಗ್ಗೆ ಪ್ರಧಾನಿಯವರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ತಿಳಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಲ್ವಾಮಾದಲ್ಲಿ ಯೋಧರ ಮೇಲಿನ ಉಗ್ರರ ದಾಳಿ ಖಂಡಿಸಿದ ಅವರು, 1962ರ ನಂತರದಲ್ಲಿ ನಡೆದ ದೊಡ್ಡ ಮಟ್ಟದ ಕುಕೃತ್ಯ ಇದಾಗಿದ್ದು, ಇದು ಉಗ್ರರ ಅಟ್ಟಹಾಸವಾಗಿದೆ. ಇದರ ಹೊಣೆಯನ್ನು ಕೇಂದ್ರ ಸರ್ಕಾರ ಹೊರಬೇಕು.ಈ ಬಗ್ಗೆ ಕ್ರಮಕೈಗೊಳ್ಳಲು ಭದ್ರತಾ ವಿಚಾರದಲ್ಲಿ ರಾಜೀ ಮಾಡಿಕೊಳ್ಳಬಾರದು ಎಂದು ಆಗ್ರಹಿಸಿದರು.
ಅಭಿನಂದನೆ: 2019-20ನೇ ಸಾಲಿನ ಆಯವ್ಯಯದಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಗೆ 200 ಕೋಟಿ ರೂ. ಅನುದಾನ ಒದಗಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಅಭಿನಂದನೆ ಸಲ್ಲಿಸಲು ಸದ್ಯದಲ್ಲೇ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಇಷ್ಟು ಮೊತ್ತದ ಅನುದಾನವನ್ನು ಕ್ರೈಸ್ತ ಅಭಿವೃದ್ಧಿ ನಿಗಮಕ್ಕಾಗಿ ನೀಡುವಂತಹ ಪ್ರಯತ್ನ ನಡೆದಿಲ್ಲ. ಇವರ ಈ ಕ್ರಮ ಕ್ರೈಸ್ತ ಸಮುದಾಯದ ಬಗ್ಗೆ ಮುಖ್ಯಮಂತ್ರಿಗಳಿಗೆ ಇರುವ ಗೌರವವನ್ನು ತೋರಿಸುತ್ತದೆ. ಸಮಾಜದಲ್ಲಿ ಶೇ.4ರಷ್ಟು ಮಂದಿ ನಮ್ಮ ಸಮುದಾಯದವರಿದ್ದಾರೆ.ಶಿಕ್ಷಣಕ್ಕೆ, ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಬೇಕಿದೆ.ನಿಗಮ ಸ್ಥಾಪನೆ ನಂತರ ಜಿಲ್ಲೆಗಳಲ್ಲಿ ವ್ಯವಸ್ಥಾಪನಾ ಕಚೇರಿಯನ್ನು ಆರಂಭಿಸಿ ಅನುಕೂಲ ಕಲ್ಪಿಸಬೇಕಿದೆ ಎಂದರು.
ಸಮುದಾಯ ಭವನಗಳ ನಿರ್ಮಾಣ, ಸ್ಮಶಾನ ಅಭಿವೃದ್ಧಿ ಉದ್ಯಮಗಳ ತರಬೇತಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.ದಲಿತ ಕ್ರೈಸ್ತರಿಗೂ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ನೀಡುವಂತೆ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಕ್ರೈಸ್ತರನ್ನು ನೇಮಕ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ನಿಗಮ ಸ್ಥಾಪನೆ ಘೋಷಣೆಗೆ ಬೆಂಬಲಿಸಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.