ನವದೆಹಲಿ,ಫೆ.15- ನಿನ್ನೆ ಜಮ್ಮುಕಾಶ್ಮೀರದ ಪುಲ್ವಾಮ ಜಿಲ್ಲೆಯ ಆವಂತಿಪುರದಲ್ಲಿ ಉಗ್ರ ನಡೆಸಿದ ಆತ್ಮಾಹುತಿ ದಾಳಿಯ ಬಗ್ಗೆ ಭಾರತಕ್ಕೆ ಮೊದಲೇ ಸುಳಿವು ಸಿಕಿತ್ತು ಎಂಬ ಬಗ್ಗೆ ಇದೀಗ ಚರ್ಚೆಯಾಗುತ್ತಿದೆ.
ಪುಲ್ವಾಮದಲ್ಲಿ ಭಯೋತ್ಪಾದಕ ಕೃತ್ಯ ನಡೆಯುವ ಎರಡು ದಿನ ಮೊದಲೇ ತಾನು ಇನ್ನೆರಡು ದಿನದಲ್ಲಿ ಉಗ್ರದಾಳಿ ನಡೆಸುವುದಾಗಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಎಚ್ಚರಿಕೆ ನೀಡಿತ್ತು. ಹೀಗೆ ಎಚ್ಚರಿಕೆ ನೀಡಿದ ವಿಡಿಯೋವನ್ನೂ ಅದು ಆನ್ ಲೈನ್ ಮೂಲಕ ಹರಿಬಿಟ್ಟಿತ್ತು!
ಅಫ್ಘಾನಿಸ್ತಾನದಲ್ಲಿ ನಡೆದ ಘಟನೆಯ ವಿಡಿಯೋವನ್ನು ಅಪ್ಲೋಡ್ ಮಾಡಿ, ಇದೇ ರೀತಿಯ ಘಟನೆ ಭಾರತದಲ್ಲೂ ನಡೆಯಲಿದೆ ಎಂದು ಅದು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿತ್ತು.
ಜಮ್ಮು-ಕಾಶ್ಮೀರದ ಅಪರಾಧ ತನಿಖಾ ವಿಭಾಗದ ಅಧಿಕಾರಿಗಳು ಈ ವಿಡಿಯೋ ಮತ್ತಿತರ ಮಾಹಿತಿಯನ್ನು ಗುಪ್ತಚರ ಇಲಾಖೆಯೊಂದಿಗೆ ಹಂಚಿಕೊಂಡಿದ್ದರು. ಆದರೆ ಗುಪ್ತಚರ ಇಲಾಖೆ ಇದನ್ನು ಗಂಭಿರವಾಗಿ ತೆಗೆದುಕೊಳ್ಳದ ಕಾರಣ ಈ ಘಟನೆ ಸಂಭವಿಸಿತು ಎಂದು ಮೂಲಗಳು ಹೇಳುತ್ತಿವೆ.
ಗುರುವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದ ಸಿಆರ್ ಪಿಎಫ್ ವಾಹನದ ಮೇಲೆ ಆತ್ಮಾಹುತಿ ದಾಳಿಕೋರ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ಅಹ್ಮದ್ ದಾರ್ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಡಿಕ್ಕಿ ಹೊಡೆಸಿದ ಪರಿಣಾಮ 37 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದು 40ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪುಲ್ವಾಮಾದಲ್ಲಿ ನಡೆದ ದಾಳಿ ಕಳೆದ 20 ವರ್ಷಗಳಲ್ಲಿಯೇ ನಡೆದ ಅತೀ ದೊಡ್ಡ ದಾಳಿಯಾಗಿದೆ. 2001ರಲ್ಲಿ ಶ್ರೀನಗರದಲ್ಲಿರುವ ಸಚಿವಾಲಯದ ಮುಂಭಾಗ ನಡೆಸಿದ ಬಾಂಬ್ ದಾಳಿಯಲ್ಲಿ 38 ಮಂದಿ ಮೃತಪಟ್ಟು, 40 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಗುರುವಾರ ಪುಲ್ವಾಮಾದಲ್ಲಿ ನಡೆದ ದಾಳಿಯ ಬಗ್ಗೆ ಭಾರತಕ್ಕೆ ಮೊದಲೇ ಸುಳಿವು ಸಿಕ್ಕಿತ್ತು ಎಂಬ ಚರ್ಚೆ ನಡೆಯುತ್ತಿದೆ.
ಫೆ. 5ರಂದು ಪಾಕಿಸ್ತಾನದ ಕರಾಚಿಯಲ್ಲಿ ಜೈಶ್ ಎ ಮೊಹ್ಮದ್ ಸಂಘಟನೆಯ ಜಾಥಾ ನಡೆದಿತ್ತು. ಇದರಲ್ಲಿ ಉಗ್ರ ಮಸೂದ್ ಅಜರ್ ಸಹೋದರ ಅಬ್ದುಲ್ ರವೂಫ್ ಅಜರ್ ಕೂಡ ಭಾಗಿಯಾಗಿದ್ದ. ಈ ವೇಳೆ ಭಾರತದಲ್ಲಿ ದಾಳಿ ನಡೆಸಲು 7 ಉಗ್ರರ ತಂಡಗಳನ್ನು ಕಳುಹಿಸುವುದಾಗಿ ಘೋಷಣೆ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.
ರವೂಫ್ ಘೋಷಣೆಯ ಬೆನ್ನಲ್ಲೇ ಅಲರ್ಟ್ ಆಗಿದ್ದ ಭಾರತದ ಗುಪ್ತಚರ ಇಲಾಖೆ, ಭಾರತದಲ್ಲಿ ಜೈಷ್ ಎ ಮೊಹಮ್ಮದ್, ಲಷ್ಕರ್ ಎ ತಯ್ಬಾ ದಾಳಿ ಬಗ್ಗೆ ಸುಳಿವು ನೀಡಿತ್ತು. ವಾಹನಗಳ ಮೂಲಕವೇ ದಾಳಿ ನಡೆಸುವುದಾಗಿ ಉಗ್ರ ಸಂಘಟನೆಯ ದೂರವಾಣಿ ಕರೆಗಳ ಮೂಲಕ ಭದ್ರತಾ ಪಡೆಗಳಿಗೆ ಮಾಹಿತಿ ಸಿಕ್ಕಿತ್ತು ಎನ್ನಲಾಗಿದೆ.