ಬೆಂಗಳೂರು, ಫೆ.15-ಭೌಗೋಳಿಕ ಗುರುತುಗಳ ಕರಡು ನೀತಿಯನ್ನು ರಾಜ್ಯ ಸಕಾರವು ರೂಪಿಸುವ ಮೂಲಕ ಸಾಂಪ್ರದಾಯಿಕ ಕುಶಲತೆ ಉತ್ತೇಜಿಸಲು ಹಾಗೂ ಸಂರಕ್ಷಿಸಲು ಬದ್ಧವಾಗಿದೆ ಎಂದು ಸರ್ಕಾರದ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ ತಿಳಿಸಿದರು.
ರಾಜ್ಯದ ಕರಡು ಭೌಗೋಳಿಕ ಗುರುತು ನೀತಿಯನ್ನು ರೂಪಿಸುವ ಸಲುವಾಗಿ ಪಾಲುದಾರರ ಸಮಾವೇಶವನ್ನು ನಗರದಲ್ಲಿ ಹಮ್ಮಿಕೊಂಡು 2018-19ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ ಭೌಗೋಳಿಕ ಗುರುತುಗಳ ವಿಷಯದಲ್ಲಿ ಪರಿಣಿತಿ ಹೊಂದಿದ ವಿಷಯ ತಜ್ಞರೊಂದಿಗೆ ಸಮಾಲೋಚಿಸಿ ಕರಡು ಭೌಗೋಳಿಕ ಗುರುತು ನೀತಿಯನ್ನು ಸಿದ್ಧಪಡಿಸಲಾಗಿದೆ.
ಈ ವೇಳೆ ಮಾತನಾಡಿದ ಅವರು, ಕರ್ನಾಟಕ ರಾಜ್ಯವು ದೇಶದಲ್ಲೇ ಅತ್ಯಧಿಕ ಅಂದರೆ 41 ಭೌಗೋಳಿಕ ಗುರುತುಗಳನ್ನು ನೋಂದಾಯಿಸಿ ಕೊಂಡಿದೆ.ಕರಕುಶಲ ಕ್ಷೇತ್ರದಲ್ಲಿ 20, ತೋಟಗಾರಿಕಾ ಉತ್ಪನ್ನಗಳಲ್ಲಿ 17, ತಯಾರಿಕಾ ಉತ್ಪನ್ನಗಳು 3 ಹಾಗೂ ಆಹಾರ ಉತ್ಪನ್ನಗಳಲ್ಲಿ ಒಂದನ್ನು ನೋಂದಾಯಿಸಲಾಗಿರುತ್ತದೆ.ಈ ವರೆಗೆ ಒಟ್ಟು 326 ಭೌಗೋಳಿಕ ಗುರುತುಗಳನ್ನು ಭಾರತದಲ್ಲಿ ನೋಂದಣಿ ಮಾಡಲಾಗಿದೆ ಎಂದು ಹೇಳಿದರು.
ಕೃಷಿ ಇಲಾಖೆ ಕಾರ್ಯದರ್ಶಿ ಎಂ.ಮಹೇಶ್ವರ್ರಾವ್ ಮಾತನಾಡಿ, ಭೌಗೋಳಿಕ ಗುರುತುಗಳ ನೋಂದಣಿಯಲ್ಲಿ ಕರ್ನಾಟಕವು ಅದ್ಬುತ ಸಾಧನೆ ಮಾಡಿದೆ.ರಾಜ್ಯದ ಹಲವಾರು ವಿಧಧ ಅಕ್ಕಿ ಬೆಳೆಗೆ ಭೌಗೋಳಿಕ ಗುರುತಿನ ಟ್ಯಾಗ್ ಇರುವುದಿಲ್ಲ.ಈ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಭೌಗೋಳಿಕಗುರುತು ನೀಡುವಲ್ಲಿ ಕೃಷಿ ಇಲಾಖೆ ಸಹಕರಿಸಲಿದೆ ಎಂದರು.
ಕೈಗಾರಿಕಾಭಿವೃದ್ಧಿ ಆಯುಕ್ತ ದರ್ಪಣ್ಜೈನ್ ಮಾತನಾಡಿ, ರಾಜ್ಯವು ಭೌಗೋಳಿಕ ಗುರುತು ನೀತಿಯಲ್ಲಿ 5ನೇ ಸ್ಥಾನ ಹೊಂದಿದೆ. ಇದರ ವಿನ್ಯಾಸ, ಮಾರುಕಟ್ಟೆ, ಸೂಕ್ಷ್ಮತೆ, ಸಮೂಹ ಅಭಿವೃದ್ದಿ ಮತ್ತು ಪ್ರಮುಖವಾಗಿ ಭೌಗೋಳಿಕ ಗುರುತುಗಳ ಉಲ್ಲಂಘನೆಯಿಂದ ರಕ್ಷಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎಂಎಸ್ಎಂಇ ಆಯುಕ್ತ ಗುಂಜನ್ಕೃಷ್ಣ, ಕೆಎಸ್ಐಸಿ ವ್ಯವಸ್ಥಾಪಕ ನಿರ್ದೇಶಕರಾದ ನೀಲಾ ಮಂಜುನಾಥ್, ವಿಟಿಪಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಸತೀಶ ಮತ್ತಿತರರು ಪಾಲ್ಗೊಂಡಿದ್ದರು.