ಬೆಂಗಳೂರು, ಫೆ.15-ಅನುದಾನ ಬಾರದಿದ್ದರೂ ಆಯ್ದ ಕೆಲ ವಿಧಾನಸಭಾ ಕ್ಷೇತ್ರಗಳಿಗೆ ಬೇಕಾಬಿಟ್ಟಿ ಜಾಬ್ಕೋಡ್ ನೀಡಿ ಸರ್ಕಾರಿ ಆದೇಶದಲ್ಲಿ ಪಾರದರ್ಶಕ ಕಾಯ್ದೆ ಉಲ್ಲಂಘಿಸಿ ಕೆಆರ್ಐಡಿಎಲ್ ಮುಖಾಂತರ ಕಾಮಗಾರಿ ಕೈಗೆತ್ತಿಕೊಳ್ಳಲು ಆದೇಶ ನೀಡಿರುವುದು ಕಾನೂನು ಬಾಹಿರ.ಕೂಡಲೇ ಕಾಮಗಾರಿಗಳಿಗೆ ನೀಡಿರುವ ಆದೇಶ ವಾಪಸ್ ಪಡೆಯಬೇಕು.ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯಸರ್ಕಾರದ ಬೇಜವಾಬ್ದಾರಿ ವಿರುದ್ಧ ಎಸಿಬಿ ಮತ್ತು ಬಿಎಂಟಿಎಫ್ಗೆ ದೂರು ನೀಡಲಾಗುವುದು ಎಂದು ಹೇಳಿದರು.
2016 ರಿಂದ ಇಲ್ಲಿಯವರೆಗೂ ರಾಜ್ಯಸರ್ಕಾರ 12,368 ಕೋಟಿ ಅನುದಾನ ಘೋಷಿಸಿದೆ.ಆದರೆ ಕೇವಲ 6,892 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ.ಉಳಿದ ಅನುದಾನ ಬಿಡುಗಡೆಯಾಗುವುದು ಯಾವಾಗ ಎಂದು ಪ್ರಶ್ನಿಸಿದರು.
ಕಳೆದ ಬಾರಿ ಬಜೆಟ್ನಲ್ಲಿ 8015 ಕೋಟಿ ಅನುದಾನ ಘೋಷಿಸಿ, ಅನುದಾನ ಬಿಡುಗಡೆ ಮಾಡದೆ ಪಾಲಿಕೆಯನ್ನು ದಿವಾಳಿ ಅಂಚಿಗೆ ದೂಡಿದೆ ಎಂದು ದೂರಿದರು.
ಎಸ್ಎಫ್ಸಿ ಅನುದಾನದಲ್ಲಿ 7.01.2019ರಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 30 ಕೋಟಿ, ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ 25 ಕೋಟಿ ಜಾಬ್ಕೋಡ್ ಕೊಡಲಾಗಿದೆ.ಆದರೆ ವರ್ಕ್ ಆರ್ಡರ್ ನೀಡಿಲ್ಲ. ಸರ್ಕಾರ ಸದರಿ ಕಾಮಗಾರಿಗಳನ್ನು ಕೆಆರ್ಐಡಿಎಲ್ ಮೂಲಕ ಕೈಗೆತ್ತಿಕೊಳ್ಳುವಂತೆ ಸೂಚಿಸಿ ಪಾರದರ್ಶಕ ಕಾಯ್ದೆ ಉಲ್ಲಂಘನೆ ಮಾಡಿದೆ ಎಂದು ಅವರು ದೂರಿದರು.
ಈಗಾಗಲೇ ಕಾಮಗಾರಿ ಮುಗಿಸಿರುವ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲು ಎರಡು ವರ್ಷ ವಿಳಂಬವಾಗಿದೆ. ಇನ್ನು ಬಾಕಿ ಉಳಿದಿರುವ 5476 ಕೋಟಿ ಹಣ ಬಿಡುಗಡೆ ಮಾಡದಿದ್ದರೆ ಗುತ್ತಿಗೆದಾರರ ಸ್ಥಿತಿ ಏನಾಗುತ್ತದೆ ಎಂಬ ಬಗ್ಗೆ ಸರ್ಕಾರ ಚಿಂತಿಸಬೇಕು ಎಂದರು.
2018-19ನೇ ಸಾಲಿನ ಮುಂಗಡಪತ್ರದಲ್ಲಿ ರಾಜ್ಯ ಹಣಕಾಸು ನಿಧಿಯಿಂದ 278 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು.ಕೇವಲ 68 ಕೋಟಿ ಮಾತ್ರ ಬಿಡುಗಡೆಯಾಗಿದೆ.ಆದರೆ ಜಾಬ್ಕೋಡ್ ನೀಡಿರುವುದು 233 ಕೋಟಿಗೆ.2018-19ಸಾಲಿನ ಸಾಲಿನಲ್ಲಿ ಹಂಚಿಕೆ ಮಾಡಿರುವ ಜಾಬ್ಕೋಡ್ಗಳಿಗೆ 165 ಕೋಟಿ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಇದರ ಬೆನ್ನಲ್ಲೇ 2019-20ರ ಸಾಲಿನ ಬಜೆಟ್ ಮಂಡನೆ ಮಾಡಲಾಗಿದೆ.ಬರಬೇಕಿರುವ ಬಾಕಿ ಹಣವನ್ನು ಎಲ್ಲಿಂದ ತರುತ್ತಾರೆ ಎಂದು ರೆಡ್ಡಿ ಪ್ರಶ್ನಿಸಿದರು.
ಪುಲಕೇಶಿನಗರ ವಿಧಾನಸಭಾ ಕ್ಷೇತ್ರಕ್ಕೆ 20 ಕೋಟಿ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ 30 ಕೋಟಿ ಅನುದಾನ ಹಂಚಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅವರ ಈ ಧೋರಣೆ ನೋಡಿದರೆ ಕ್ಷೇತ್ರಗಳ ಅಭಿವೃದ್ಧಿಗಿಂತ ಹಣ ಲೂಟಿಗೆ ಸರ್ಕಾರ ನಿಂತಿದೆ ಅನ್ನಿಸುತ್ತಿದೆ ಎಂದು ಕಿಡಿಕಾರಿದರು.
ಸಮ್ಮಿಶ್ರ ಸರ್ಕಾರ ಜೆಡಿಎಸ್-ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ಮಾಡಿ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ವಂಚನೆ ಮಾಡಿದೆ.ಈ ಎಲ್ಲಾ ಬೆಳವಣಿಗೆ ನೋಡಿದರೆ ಅವರಿಗೆ ಲೂಟಿಯೇ ಮುಖ್ಯ ಎಂಬುದು ಎದ್ದು ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಬೇಕಾಬಿಟ್ಟಿ ಹಂಚಿಕೆ ಮಾಡಿರುವ ಅನುದಾನವನ್ನು ತಡೆಹಿಡಿಯಬೇಕು. ಜಾಬ್ಕೋಡ್ ವಾಪಸ್ ಪಡೆಯಬೇಕು, ಇಲ್ಲದಿದ್ದರೆ ಬಿಜೆಪಿ ಉಗ್ರ ಹೋರಾಟ ಮಾಡಲಿದೆ ಎಂದು ಪದ್ಮನಾಭರೆಡ್ಡಿ ಎಚ್ಚರಿಸಿದರು.