ವಾಷಿಂಗ್ಟನ್, ಫೆ.15- ಪುಲ್ವಾಮಾ ದಾಳಿಯ ಹಿಂದೆ ಪಾಕಿಸ್ತಾನದ ಐಎಸ್ಐ ಪಾತ್ರವಿದೆ ಎಂದು ಅಮೆರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದಾಳಿಯ ಹೊಣೆ ಹೊತ್ತಿರುವ ಜೈಷ್-ಇ-ಮೊಹಮದ್ ಸಂಘಟನೆ ಸೇರಿದಂತೆ ವಿವಿಧ ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರುವಲ್ಲಿ ಅಮೆರಿಕ ವಿಫಲವಾಗಿರುವುದೇ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣ ಎಂದು ತಜ್ಞರು ಹೇಳಿದ್ದಾರೆ.
ಅಮೆರಿಕದ ಸಿಐಎ ಸಂಸ್ಥೆಯ ಮಾಜಿ ಅಧಿಕಾರಿ ಬ್ರೂಸ್ ರೀಡಲ್ ಅವರು ಪುಲ್ವಾಮಾ ಘಟನೆಗೆ ನಾವೇ ಹೊಣೆ ಎಂದು ಜೈಷ್ ಸಂಸ್ಥೆ ಘೋಷಿಸಿರುವುದರಿಂದ ಈ ಘಟನೆಯ ಹಿಂದೆ ಪಾಕ್ ಕೈವಾಡವಿದೆ ಎನ್ನುವುದು ಸಾಬೀತಾಗಿದೆ ಎಂದಿದ್ದಾರೆ.
ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಆಡಳಿತ ಜಾರಿಗೊಂಡ ನಂತರ ಭಾರತದಲ್ಲಿ ನಡೆದಿರುವ ಅತಿ ದೊಡ್ಡ ಘೋರ ಕೃತ್ಯವಿದು. ಇದರ ಪರಿಣಾಮ ಎದುರಿಸಲು ಖಾನ್ ಅವರು ಸಿದ್ಧರಾಗುವ ಅವಶ್ಯಕತೆ ಇದೆ.
ಈ ಸವಾಲನ್ನು ಇಮ್ರಾನ್ ಖಾನ್ ಯಾವ ರೀತಿ ಎದುರಿಸಬೇಕು ಎನ್ನುವುದನ್ನು ತಜ್ಞರೊಂದಿಗೆ ಸಮಾಲೋಚಿಸಿ ಉತ್ತಮ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ರೀಡಲ್ ಸಲಹೆ ನೀಡಿದ್ದಾರೆ.
ಜಮ್ಮು-ಕಾಶ್ಮೀರ ಕಣಿವೆಯಲ್ಲಿ ಪಾಕ್ ಮೂಲದ ಉಗ್ರ ಸಂಘಟನೆಗಳು ಕಾರ್ಯಾಚರಣೆ ನಡೆಸುತ್ತಿರುವುದಕ್ಕೆ ಈ ಒಂದು ಪ್ರಕರಣ ಉದಾಹರಣೆಯಾಗಿದೆ ಎಂದು ಒಬಾಮಾ ಆಡಳಿತದಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿಯ ಅಧಿಕಾರಿಯಾಗಿದ್ದ ಅನೀಶ್ ಗೋಯಲ್ ಹೇಳಿದ್ದಾರೆ.
ಪುಲ್ವಾಮಾ ಘಟನೆಯ ನಂತರ ಕಾಶ್ಮೀರ ಕಣಿವೆಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಪಾಕ್ ಮೂಲದ ಉಗ್ರ ಸಂಘಟನೆಗಳನ್ನು ಬೇರು ಸಮೇತ ಕಿತ್ತು ಹಾಕುವಂತೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಬೀಳುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ