ರಾಷ್ಟ್ರೀಯ ಏಕತೆ ಮತ್ತು ಭದ್ರತೆಗೆ ಎಲ್ಲರೂ ಒಂದಾಗಬೇಕು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

ನವದೆಹಲಿ, ಫೆ.15- ದೇಶದ ಭದ್ರತೆ ವಿಚಾರದಲ್ಲಿ ರಾಜಕೀಯ ಮಾಡಬಾರದು. ರಾಷ್ಟ್ರೀಯ ಏಕತೆ ಮತ್ತು ಭದ್ರತೆಗೆ ಎಲ್ಲರೂ ಒಂದಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಿ ನಮ್ಮ ಶಕ್ತಿ ಏನೆಂಬುದನ್ನು ಸಾಬೀತುಪಡಿಸುವ ಅವಶ್ಯಕತೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪ್ರತಿಪಕ್ಷಗಳಿಗೆ ಕರೆ ನೀಡಿದ್ದಾರೆ.

ಕಾಶ್ಮೀರದ ಪುಲ್ವಾಮಾ ಬಳಿ ನಡೆದ ಉಗ್ರರ ದಾಳಿಯಲ್ಲಿ 37 ಸಿಆರ್‍ಪಿಎಫ್ ಯೋಧರು ಬಲಿಯಾಗಿರುವುದಕ್ಕೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ ಎಂದು ಕಾಂಗ್ರೆಸ್ ಮತ್ತಿತರ ಪಕ್ಷಗಳು ಟೀಕಿಸಿರುವ ಬೆನ್ನಲ್ಲೇ ಸರಣಿ ಟ್ವಿಟ್ ಮಾಡಿರುವ ಷಾ ಅವರು ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು ನಾವು ಬದ್ಧ. ನಮ್ಮ ಕಾರ್ಯದಲ್ಲಿ ನೀವು ಕೈ ಜೋಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ದೇಶವೇ ಮುಖ್ಯ. ಇದರ ಮುಂದೆ ಬೇರೆಲ್ಲ ನಗಣ್ಯ. ನಮ್ಮ ದೇಶ ಕಾಪಾಡಲು ನಾವೆಲ್ಲರೂ ಒಂದಾಗುವ ಅವಶ್ಯಕತೆಯಿದೆ. ಈ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ ಎಂದು ಷಾ ಹೇಳಿಕೊಂಡಿದ್ದಾರೆ.

ಶತ್ರುಗಳು ನಮ್ಮ ಸೈನಿಕರನ್ನು ಬಲಿ ತೆಗೆದುಕೊಳ್ಳುವ ಮೂಲಕ ತಮ್ಮ ಪೈಶಾಚಿಕ ಕೃತ್ಯ ಮೆರೆದಿದ್ದಾರೆ. ಇದು ಖಂಡನೀಯ. ದಾಳಿಯಲ್ಲಿ ಹುತಾತ್ಮರಾದ ಕುಟುಂಬದವರ ನೆರವಿಗೆ 130 ಕೋಟಿ ಭಾರತೀಯರು ಸಿದ್ಧರಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಯೋಧರು ಬೇಗ ಚೇತರಿಸಿಕೊಳ್ಳಲಿ. ಭವಿಷ್ಯದಲ್ಲಿ ಪಾಪಿಗಳಿಗೆ ತಕ್ಕ ಉತ್ತರ ನೀಡಲು ಮೋದಿ ಸರ್ಕಾರ ಸಿದ್ಧವಿದೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ