ಬೆಂಗಳೂರು, ಫೆ.15- ಆತಂಕವಾದಿಗಳು ನಮ್ಮ ದೇಶದ ಮೇಲೆ ನಿರಂತರವಾಗಿ ದಾಳಿ ಮಾಡುತ್ತಲೇಇದ್ದಾರೆ.ಕೇಂದ್ರ ಸರ್ಕಾರ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಮೂಲಕ ಭಯೋತ್ಪಾದನೆಗೆ ತಕ್ಕ ಪಾಠ ಕಲಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಸಲಹೆ ನೀಡಿದ್ದಾರೆ.
ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಿಂದ ಹುತಾತ್ಮರಾದ 42 ಮಂದಿ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ಕೆಪಿಸಿಸಿ ಕಚೇರಿಯಲ್ಲಿ 42 ಮೇಣದ ಬತ್ತಿಗಳನ್ನು ಬೆಳಗಿ ಮೌನಾಚರಣೆ ನಡೆಸಿದ ನಂತರ ಮಾತನಾಡಿದ ಅವರು, ಆತ್ಮಾಹುತಿ ಉಗ್ರರು ಯೋಧರ ಮೇಲೆ ದಾಳಿ ನಡೆಸಿದ್ದಾರೆ.ಇದೊಂದು ಭೀಕರ ಘಟನೆ. ಇಂತಹ ದಾಳಿಯನ್ನು ನಾವೆಲ್ಲ ಒಂದಾಗಿ ಎದುರಿಸಬೇಕು.ಸರ್ಕಾರಕ್ಕೆ ನೈತಿಕ ಬೆಂಬಲ ನೀಡಬೇಕು ಎಂದರು.
ಕಳೆದ ನಾಲ್ಕೈದು ವರ್ಷಗಳಲ್ಲಿ ಉಗ್ರರ ದಾಳಿಗಳು ಹೆಚ್ಚಾಗಿವೆ. ನಮ್ಮ ಯೋಧರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ.ಅವರ ಮನೋಸ್ಥೈರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಡೀ ದೇಶ ಯೋಧರ ಜತೆ ನಿಲ್ಲಬೇಕೆಂದು ಸಲಹೆ ನೀಡಿದರು.
ಮಂಡ್ಯದ ಗುರು ಅವರು ಘಟನೆಯಲ್ಲಿ ಮೃತಪಟ್ಟಿದ್ದಾರೆ.ಪಕ್ಷ ಅವರ ಕುಟುಂಬದ ಬೆನ್ನಿಗೆ ನಿಲ್ಲಲಿದೆ. ಪಕ್ಷದ ವತಿಯಿಂದ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲಾಗುವುದು. ಸರ್ಕಾರದಿಂದ ಅವರ ಕುಟುಂಬದ ಸದಸ್ಯರಿಗೆ ಉದ್ಯೋಗ ಕೊಡಿಸಲಾಗುವುದು ಎಂದು ಹೇಳಿದರು.
ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಘಟನೆಯನ್ನು ತೀವ್ರವಾಗಿ ಖಂಡಿಸಿದರು.
ಕೆಪಿಸಿಸಿ ಪ್ರಧಾನಕಾರ್ಯದರ್ಶಿ ವಿ.ವೈ.ಘೋರ್ಪಡೆ, ಶಫಿವುಲ್ಲಾ, ಎಐಸಿಸಿ ಕಾರ್ಯದರ್ಶಿ ಶೈಲಜಾನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.