ಬೆಂಗಳೂರು,ಫೆ.14- ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡಿಸಿರುವ ಈ ಬಾರಿಯ ಬಜೆಟ್‍ನಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ ಎಂದು ಎಸ್‍ಡಿಪಿಐ(ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯ) ಆರೋಪಿಸಿದೆ.
ಸುದ್ದಿಗೋಷ್ಟಿಯಲ್ಲಿಂದು ಎಸ್‍ಡಿಪಿಐನ ರಾಜ್ಯ ಪ್ರಧಾನ ಕಾರ್ಯದರ್ಸಿ ಅಬ್ದುಲ್ ಅನ್ನಾನ್ ಮಾತನಾಡಿ, ರಜ್ಯದ ಬಜೆಟ್ ಮೊತ್ತ 2,34,153 ಕೋಟಿ ರೂ.ಗಳ ಪೈಕಿ ಎಲ್ಲ ಅಲ್ಪಸಂಖ್ಯಾತ ಸಮುದಾಯಗಳಿಗೆ ಒಂದು ಸಾವಿರ ಕೋಟಿ ನೀಡಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರ, 2300 ಕೋಟಿ ನೀಡಿತ್ತು. ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಸಿಖ್, ಕ್ರೈಸ್ತ, ಜೈನ, ಪಾರ್ಸಿ, ಬೌದ್ಧ ಜನಸಂಖ್ಯೆ ರಾಜ್ಯದಲ್ಲಿ ಶೇ.20ಕ್ಕಿಂತ ಹೆಚ್ಚಿದೆ.ನಮಗೆ ನೀಡಿರುವ ಅಲ್ಪ ಮೊತ್ತದಲ್ಲಿ ಸಮುದಾಯಗಳ ಅಭಿವೃದ್ಧಿ ಸಾಧ್ಯವಿಲ್ಲ ಎಂದು ತಿಳಿಸಿದರು.
ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಮೀಸಲಿಡಬೇಕೆಂದು ಹೋರಾಡುತ್ತಲೇ ಬಂದಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಈ ಬಾರಿಯಾದರೂ 10 ಸಾವಿರ ಕೋಟಿ ರೂ.ಗಳನ್ನು ನಮ್ಮ ಸಮುದಾಯಕ್ಕೆ ಮೀಸಲಿಡಬೇಕೆಂದು ಅವರು ಒತ್ತಾಯಿಸಿದರು.
ಕಳೆದ ಚುನವಣೆ ಸಂದರ್ಭದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಸಾಚಾರ್ ಮತ್ತು ಮಿಶ್ರ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ್ದವು.ಆದ್ದರಿಂದ ನಮ್ಮ ಮುಸ್ಲಿಂ ಸಮುದಾಯ ಜೆಡಿಎಸ್-ಕಾಂಗ್ರೆಸ್ ಶೇ.65ರಷ್ಟು ಮತ ನೀಡಿದ್ದೆವು.ಆದರೆ ಈ ಪಕ್ಷಗಳು ಅಧಿಕಾರಕ್ಕೆ ಬಂದ ಮೇಲೆ ಕೊಟ್ಟ ಭರವಸೆಗಳನ್ನು ಈಡೇರಿಸಲಿಲ್ಲ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಪ್ಸರ್ ಕೊಡ್ಲಿಪೇಟೆ, ಜಾವಿದ್ ಆಜಾಂ, ಶರೀಫ್ ಮತ್ತಿತರರು ಉಪಸ್ಥಿತರಿದ್ದರು.