ಶಾಸಕ ಪ್ರೀತಂಗೌಡ ಮನೆ ಮೇಲೆ ಕಲ್ಲುತೂರಾಟ: ಘಟನೆಯನ್ನು ಖಂಡಿಸಿ ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ

ಬೆಂಗಳೂರು, ಫೆ.14- ಹಾಸನ ಶಾಸಕ ಪ್ರೀತಂಗೌಡ ನಿವಾಸದ ಮೇಲೆ ಜೆಡಿಎಸ್ ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿರುವುದನ್ನು ಖಂಡಿಸಿ ಇಂದು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ.

ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಬಿಜೆಪಿ ಘಟಕ, ಪ್ರಮುಖ ರಸ್ತೆ, ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಕಾರ್ಯಕರ್ತರನ್ನೊಡಗೂಡಿ ಬೀದಿಗಿಳಿದು ಧರಣಿ ನಡೆಸಿತು.

ಇದೊಂದು ಕೊಲೆ ಯತ್ನ ಪ್ರಕರಣವಾಗಿದ್ದು, ಈ ಪ್ರಕರಣದಲ್ಲಿ ಕಲ್ಲು ತೂರಾಟ ನಡೆಸಿದ ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಘೋಷಣೆ ಕೂಗಿದರು.

ಹಾಸನ, ತುಮಕೂರು, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಸೇರಿದಂತೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಇಂದು ಬೆಳಗಿನಿಂದಲೇ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ತುಮಕೂರಿನ ಟೌನ್‍ಹಾಲ್ ವೃತ್ತದ ಬಳಿ ಮಾಜಿ ಸಂಸದ ಜಿ.ಎಸ್.ಬಸವರಾಜು, ಯುವಘಟಕದ ಅಧ್ಯಕ್ಷ ಹನುಮಂತರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಮುಖಂಡರ ವಿರುದ್ಧ ಜೆಡಿಎಸ್‍ನ ಪ್ರಮುಖರು ದ್ವೇಷದ ರಾಜಕಾರಣ ಮಾಡಲು ಹೊರಟಿದ್ದಾರೆ. ಇದಕ್ಕೆ ನಾವು ಜಗ್ಗುವುದಿಲ್ಲ ಎಂದು ಜಿ.ಎಸ್.ಬಸವರಾಜು ಹೇಳಿದರು.

ಕುತಂತ್ರದ ರಾಜಕಾರಣ ಮಾಡುವ ಮೂಲಕ ಬಿಜೆಪಿಯನ್ನು ನಿರ್ಮೂಲನೆ ಮಾಡಬೇಕೆಂದುಕೊಂಡಿದ್ದರೆ ಅದು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಪ್ರೀತಂಗೌಡ ಮನೆ ಮೇಲೆ ಕಲ್ಲು ತೂರಾಟ ನಡೆಸಿರುವುದು, ಮನೆಗೆ ನುಗ್ಗಲು ಯತ್ನಿಸಿರುವುದರ ಹಿಂದೆ ಪ್ರಮುಖರ ಕೈವಾಡವಿದೆ ಎಂದು ಆರೋಪಿಸಿದರು.

ಮೈಸೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪ್ರೀತಂಗೌಡ ಅವರ ನಿವಾಸ ಹಾಗೂ ಬೆಂಬಲಿಗರ ಮೇಲೆ ನಡೆದ ದಾಳಿ ಖಂಡಿಸಿ ತಪ್ಪಿತಸ್ಥರಿಗೆ ಕೂಡಲೇ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ಧರಣಿ ನಡೆಸಿದರು.

ಈ ವೇಳೆ ಜೆಡಿಎಸ್ ಹಾಗೂ ಸರ್ಕಾರದ ವಿರುದ್ಧ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಹಾಸನದಲ್ಲೂ ಸಹ ಪ್ರೀತಂಗೌಡ ಪರವಾಗಿ ಬಿಜೆಪಿ ಕಾರ್ಯಕರ್ತರು ರಸ್ತೆಗಿಳಿದು ಜಿಲ್ಲಾಧಿಕಾರಿ ಕಚೇರಿವರೆಗೂ ಪಾದಯಾತ್ರೆಯಲ್ಲಿ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಜೆಡಿಎಸ್ ದ್ವೇಷದ ರಾಜಕಾರಣ ನಡೆಸುತ್ತಿದೆ. ಇಂತಹ ಅಹಿತಕರ ಘಟನೆ ನಡೆಯಬಾರದಿತ್ತು.ಆದರೆ, ಶಾಸಕರ ಮನೆ ಮುಂದೆ ಕಲ್ಲು ತೂರಾಟ ನಡೆಸಿದಂತಹ ಕೃತ್ಯ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪ್ರತಿಭಟನೆ ಹತ್ತಿಕ್ಕಲು ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಕೊಲೆ ಯತ್ನ ನಡೆಸಲಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಜೆಡಿಎಸ್ ಕಾರ್ಯಕರ್ತರ ಗೂಂಡಾ ವರ್ತನೆ ವಿರುದ್ಧ ಕ್ರಮ ಕೈಗೊಳ್ಳಬೇಕು.ಇಲ್ಲದಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತವೆ. ಪ್ರೀತಂಗೌಡ ಹಾಗೂ ಮನೆಯವರಿಗೆ ರಕ್ಷಣೆ ಬೇಕು ಎಂದು ಒತ್ತಾಯಿಸಿದರು.

ಇದಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಕಾರ್ಯಕರ್ತರು ಪ್ರಮುಖ ರಸ್ತೆ, ವೃತ್ತಗಳಲ್ಲಿ ಜಮಾಯಿಸಿ ಖಂಡನೆ ಖಂಡಿಸಿ ಪ್ರತಿಭಟನೆಗೆ ಮುಂದಾದರು. ಪೊಲೀಸರು ಮುಂಜಾಗ್ರತಾ ಕ್ರಮ ವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ