ಬೆಂಗಳೂರು,ಫೆ.14- ಆಪರೇಷನ್ ಕಮಲದ ಆಡಿಯೋ ಪ್ರಕರಣ ಬಹಿರಂಗಗೊಂಡು ತೀವ್ರ ಮುಜುಗರಕ್ಕೆ ಸಿಲುಕಿರುವ ಕೇಂದ್ರ ಬಿಜೆಪಿ ವರಿಷ್ಠರು ಪ್ರಕರಣ ಕುರಿತಂತೆ ಸಂಪೂರ್ಣ ವರದಿ ನೀಡುವಂತೆ ಸೂಚಿಸಿದೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಈ ಘಟನೆ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮುಜುಗರವಾಗುವುದನ್ನು ತಪ್ಪಿಸುವ ಹಿನ್ನೆಲೆಯಲ್ಲಿ ವರದಿ ನೀಡುವಂತೆ ಖುದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ಕೊಟ್ಟಿದ್ದಾರೆ.
ಕರ್ನಾಟಕದಲ್ಲಿ ನಡೆದಿರುವ ಬೆಳವಣಿಗೆಗಳು ಪಕ್ಷಕ್ಕೆ ಹಾನಿ ಉಂಟು ಮಾಡಿದೆ.ರಾಷ್ಟ್ರ ಮಟ್ಟದಲ್ಲಿ ನಾವು ತಲೆತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ಲೋಕಸಭೆ ಚುನಾವಣೆ ಹತ್ತಿರವಿರುವಾಗ ಇದೆಲ್ಲ ಬೇಕಿತ್ತೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವ ಅಮಿತ್ ಷಾ, ಇಂತಹ ಘಟನೆಗಳನ್ನು ನಾವು ಹೇಗೆ ಸಮರ್ಥಿಸಿಕೊಳ್ಳಬೇಕು. ನಿಮ್ಮ ರಾಜಕೀಯ ಅನುಭವದಷ್ಟು ವಯಸ್ಸಾಗಿರದವನ ಜೊತೆ ಮಾತನಾಡುವ ಅಗತ್ಯವಾದರೂ ಏನಿತ್ತು? ನಿಜಕ್ಕೂ ಇದು ತಲೆತಗ್ಗಿಸುವ ವಿಷಯ ಎಂದು ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ಜೊತೆಯೂ ಮಾತನಾಡಿರುವ ಅಮಿತ್ ಷಾ, ಆಡಿಯೋ ಪ್ರಕರಣ ಕುರಿತಂತೆ ಪೂರ್ಣ ಮಾಹಿತಿ ನೀಡಬೇಕು. ಪಕ್ಷ ಇಂತಹ ಬೆಳವಣಿಗೆಗಳನ್ನು ಸಹಿಸುವುದಿಲ್ಲ ಯಾರ ಮೇಲೆ ಕ್ರಮ ಜರುಗಿಸಬೇಕು ಎಂಬುದನ್ನು ನಾವು ತೀರ್ಮಾನಿಸುತ್ತೇವೆ ಮೊದಲು ವರದಿ ಕೊಡಿ ಎಂದು ಸೂಚನೆ ಕೊಟ್ಟಿರುವುದಾಗಿ ತಿಳಿದುಬಂದಿದೆ.
ಕೇಂದ್ರದಲ್ಲಿ ಪುನಃ ನಮ್ಮ ಪಕ್ಷ ಅಧಿಕಾರಕ್ಕೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಪ್ರತಿಪಕ್ಷಗಳು ಏನೇ ಅಬ್ಬರಿಸಿದರೂ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಈಗಲೂ ದೇಶದ ಜನತೆ ಅಭಿಮಾನ ಇಟ್ಟುಕೊಂಡಿದ್ದಾರೆ.
ಇಂತಹ ಸಂದರ್ಭದಲ್ಲಿ ಅದೂ ಅಧಿವೇಶನ ನಡೆಯುತ್ತಿರುವಾಗ ಇದೆಲ್ಲ ಬೇಕಿತ್ತೇ?ಈ ಪ್ರಕರಣವನ್ನು ನಾವು ಹೇಗೆ ಸಮರ್ಥಿಸಿಕೊಳ್ಳಬೇಕು.ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇತರರಿಗೆ ಮಾದರಿಯಾಗಬೇಕು.ಅವರೇ ತಪ್ಪು ಮಾಡಿದರೆ ನಾವು ಯಾರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪ್ರಶ್ನಿಸಿದ್ದಾರೆ.
ಲೋಕಸಭೆ ಚುನಾವಣೆ ವೇಳೆ ಸಹನೆಯಿಂದ ಕಾದಿದ್ದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಕಾಂಗ್ರೆಸ್-ಜೆಡಿಎಸ್ನವರೇ ಹಾದಿಬೀದಿಯಲ್ಲಿ ಕಿತ್ತಾಡಿಕೊಂಡು ಸರ್ಕಾರವನ್ನು ಅವರೇ ಅಸ್ಥಿರಗೊಳಿಸುತ್ತಿದ್ದರು. ಕಾಂಗ್ರೆಸ್ ಶಾಸಕರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ ನಾನು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಖುದ್ದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರೇ ಹೇಳಿದ್ದರು. ನೀವು ಮಾಡಿಕೊಂಡ ತಪ್ಪಿನಿಂದಾಗಿ ಎರಡೂ ಪಕ್ಷಗಳ ಶಾಸಕರನ್ನು ಒಟ್ಟು ಮಾಡಿದ್ದೀರಿ.ಸರ್ಕಾರದಲ್ಲಿ ಭಿನ್ನಮತವನ್ನು ಶಮನಗೊಳಿಸಿದ್ದೀರಿ.ಈಗ ನೀವೇ ತೋಡಿಕೊಂಡ ಬಾವಿಯಲ್ಲಿ ಬೀಳುವಂತಾಗಿದೆ.
ಪಕ್ಷಕ್ಕೆ ಸಂಬಂಧಪಟ್ಟ ಕೆಲವು ವಿಷಯಗಳನ್ನು ತಿಳಿದುಕೊಳ್ಳುವಾಗ ವರಿಷ್ಠರ ಸಲಹೆ ಸೂಚನೆ ಪಡೆಯಬೇಕು. ಎಲ್ಲವನ್ನೂ ನಾವೇ ಮಾಡುತ್ತೇವೆ ಎಂದುಕೊಂಡರೆ ತಿರುಗುಬಾಣವಾಗುತ್ತದೆ. ದೇಶದ ಯಾವುದೇ ರಾಜ್ಯದಲ್ಲೂ ಇಲ್ಲದ ಭಿನ್ನಮತ, ಅಸಮಾಧಾನ ಕರ್ನಾಟಕದಲ್ಲಿದೆ. ವಿಧಾನಸಭೆಗೂ ಮುನ್ನವೇ ಇಂತದ್ದೇ ಪರಿಸ್ಥಿತಿ ಇತ್ತು.
ನಾಯಕರು ಪರಸ್ಪರ ಅಪನಂಬಿಕೆಗಳನ್ನು ಹೋಗಲಾಡಿಸಿಕೊಂಡು ಪಕ್ಷವನ್ನು ಮುನ್ನಡೆಸಿದರೆ ಇಂತಹ ಘಟನೆಗಳು ಉದ್ಭವಿಸುವುದಿಲ್ಲ. ಕರ್ನಾಟಕದಲ್ಲಿ ನಡೆದಿರುವ ಬೆಳವಣಿಗೆ ನಮಗಂತೂ ತಲೆ ತಗ್ಗಿಸುವಂತಾಗಿದೆ ಎಂದು ಅಮಿತ್ ಷಾ ರಾಜ್ಯವನ್ನು ಪ್ರನಿಧಿಸುವ ಕೇಂದ್ರ ಸಚಿವರ ಬಳಿ ಅಸಮಾಧಾನ ಹೊರ ಹಾಕಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ನಾವು ಹೆಚ್ಚಿನ ಸ್ಥಾನಗಳನ್ನು ನಿರೀಕ್ಷೆ ಮಾಡಿದ್ದೆವು. ಆದರೆ ಈ ಘಟನೆಯಿಂದಾಗಿ ನಿಷ್ಠಾವಂತ ಕಾರ್ಯಕರ್ತರೂ ಕೂಡ ತಲೆತಗ್ಗಿಸುವಂತಾಗಿದೆ.
ಕೆಲವು ಕಾರಣಗಳಿಗಾಗಿ ಕರ್ನಾಟಕದ ವಿಷಯದಲ್ಲಿ ಈವರೆಗೂ ಮಧ್ಯಪ್ರವೇಶ ಮಾಡುತ್ತಿರಲಿಲ್ಲ. ಅಗತ್ಯ ಕಂಡುಬಂದರೆ ಇನ್ನು ಮುಂದೆ ನಾವೇ ಎಲ್ಲವನ್ನೂ ನೋಡಿಕೊಳ್ಳಬೇಕಾಗುತ್ತದೆ ಎಂದು ಸ್ಪಷ್ಟ ಮಾತುಗಳಲ್ಲಿ ಹಿರಿಯ ಸಚಿವರೊಬ್ಬರ ಬಳಿ ಹೇಳಿರುವುದಾಗಿ ತಿಳಿದುಬಂದಿದೆ.