ಬೆಂಗಳೂರು, ಫೆ.13-ಕಾಂಗ್ರೆಸ್ನ ಅತೃಪ್ತ ನಾಲ್ವರು ಶಾಸಕರು, ಪಕ್ಷೇತರ ಇಬ್ಬರು ಶಾಸಕರು ಇಂದು ವಿಧಾನಸಭೆಗೆ ಹಾಜರಾಗುವ ಮೂಲಕ ಎಲ್ಲರ ಗಮನ ಸೆಳೆದರು.
ಸಂಪುಟ ಪುನಾರಚನೆ ನಂತರ ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿದ್ದ ಕಾವೇರಿದ ವಾತಾವರಣದಿಂದಾಗಿ ಈ ಆರು ಮಂದಿ ಶಾಸಕರು ಬಂಡಾಯವೆದ್ದಿದ್ದರು.
ಕಾಂಗ್ರೆಸ್ನ ರಮೇಶ್ ಜಾರಕಿ ಹೊಳಿ, ಮಹೇಶ್ ಕುಮಟಳ್ಳಿ, ನಾಗೇಂದ್ರ, ಉಮೇಶ್ಜಾಧವ್, ಪಕ್ಷೇತರರಾದ ನಾಗೇಶ್ ಮತ್ತು ಆರ್.ಶಂಕರ್ ಅವರು ಅಧಿವೇಶನದಿಂದ ಹೊರಗುಳಿದಿದ್ದರು.
ಇಂದು ಮುಂಬೈನ ಹೊಟೇಲ್ ತೆರವು ಮಾಡಿ ಬೆಂಗಳೂರಿಗೆ ಆಗಮಿಸಿರುವ ಆರು ಮಂದಿ ಶಾಸಕರು ವಿಧಾನಸಭೆಯ ಮೊಗಸಾಲೆಯಲ್ಲಿ ಕಾಣಿಸಿಕೊಂಡರು.
ರಮೇಶ್ ಜಾರಕಿ ಹೊಳಿ ಅವರು ಎಲ್ಲಾ ಶಾಸಕರನ್ನು ಮಾತನಾಡಿಸುತ್ತಾ ಯೋಗಕ್ಷೇಮ ವಿಚಾರಿಸುತ್ತಿದ್ದರು.
ಕಾಂಗ್ರೆಸ್ ಅತೃಪ್ತ ಶಾಸಕರನ್ನು ಕಂಡ ಇತರ ಶಾಸಕರು ಆಶ್ಚರ್ಯಚಕಿತರಾಗಿ ಉಭಯ ಕುಶಲೋಪರಿ ವಿಚಾರಿಸುವ ಜೊತೆಗ ಚುಡಾಯಿಸುವ ಧಾಟಿಯ್ಲಲೂ ಮಾತನಾಡಿದರು. ಇದಕ್ಕೆ ಅತೃಪ್ತರು ಸಮಾಧಾನದಿಂದಲೇ ಉತ್ತರ ನೀಡುತ್ತಿದ್ದುದು ಕಂಡುಬಂತು.
ಕಾಂಗ್ರೆಸ್ಗೆ ಮತ ದೇಶಕ್ಕೆ ಹಿತ:
ಪಕ್ಷೇತರ ಶಾಸಕರಾದ ಶಂಕರ ಮತ್ತು ನಾಗೇಶ್ ಅವರು ಆಡಳಿತ ಪಕ್ಷದ ಮೊಗಸಾಲೆಗೆ ಬಂದಾಗ ಆಡಳಿತ ಪಕ್ಷದ ಶಾಸಕರಾದ ರಾಮಲಿಂಗಾರೆಡ್ಡಿ, ಮುನಿರತ್ನ, ಭೆರತಿ ಬಸವರಾಜ್, ಎಂ.ಶಿವಲಿಂಗೇಗೌಡ ಅವರು ತಮ್ಮ ಬಳಿ ಕೂರಿಸಿಕೊಂಡು ತಿಳಿ ಹೇಳುವ ಪ್ರಯತ್ನ ನಡೆಸಿದರು.
ಬಿಜೆಪಿಯವರು ತಿಪ್ಪರಲಾಗ ಹಾಕಿದರೂ ಸರ್ಕಾರ ರಚನೆ ಮಾಡಲಾಗುವುದಿಲ್ಲ. ಅವರಲ್ಲೇ ಮೂರು ಬಣಗಳಿವೆ. ಅವರು ಸರ್ಕಾರ ಮಾಡಲು ಸಾಧ್ಯವಿಲ್ಲ. ಅವರನ್ನುನಂಬಿ ನೀವು ಕೆಡಬೇಡಿ. ನಮ್ಮ ಜೊತೆ ಇರಿ. ಕಾಂಗ್ರೆಸ್ಗೆ ಮತ ದೇಶಕ್ಕೆ ಹಿತ. ನೀವೇನಂತೀರಿ ಎಂದು ಪಕ್ಷೇತರರನ್ನು ಕೇಳುತ್ತಿದ್ದರು.
ಅದಕ್ಕೆ ಪಕ್ಷೇತರ ಶಾಸಕರು ನಮಗೂಪರಿಸ್ಥಿತಿ ಅರಿವಾಗಿದೆ. ನಾವು ಸರ್ಕಾರದ ಜೊತೆಯಲ್ಲಿರುತ್ತೇವೆ ಎಂದು ಹೇಳುತ್ತಿದ್ದರು. ಔಪಚಾರಿಕವಾಗಿ ನಡೆದ ಈ ಮಾತುಕತೆಗಳು ಎಲ್ಲರ ಗಮನ ಸೆಳೆಯಿತು.
ಮೊಗಸಾಲೆಯಲ್ಲಿ ಕಾಣಿಸಿಕೊಂಡ ಅತೃಪ್ತರು ನಂತರ ಸ್ಪೀಕರ್ ರಮೇಶ್ಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.ನಂತರ ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿ ಆಡಳಿತ ಪಕ್ಷದ ಶಾಸಕರ ಭಾಗದಲ್ಲಿ ಕುಳಿತುಕೊಂಡಿದ್ದರು.