ಇಂದು ಲೋಕಸಭೆಗೆ ರಾಫೆಲ್ ಯುದ್ಧ ವಿಮಾನ ಒಪ್ಪಂದದ ಸಿಎಜಿ ವರದಿ ಸಲ್ಲಿಕೆ

ಹೊಸದಿಲ್ಲಿ: 36 ರಾಫೆಲ್​  ಯುದ್ಧ ವಿಮಾನ ಖರೀದಿ ಒಪ್ಪಂದ ಸಂಬಂಧ ಇಂದು ಲೋಕಸಭೆಗೆ ಸಿಎಜಿ ವರದಿ ಸಲ್ಲಿಕೆಯಾಗಲಿದೆ. ಆದರೆ, ಮೂಲಗಳ ಪ್ರಕಾರ, ಒಪ್ಪಂದ ಖರೀದಿ ದರ ವಿವರವನ್ನು ತಿಳಿಸಲಾಗುವುದಿಲ್ಲ ಎನ್ನಲಾಗಿದೆ. ಈ ಒಪ್ಪಂದದಲ್ಲಿ ಸರ್ಕಾರ ಭ್ರಷ್ಟಾಚಾರ ಎಸಗಿದೆ ಎಂದು ವಿರೋಧ ಪಕ್ಷಗಳು ಬಲವಾಗಿ ಆರೋಪ ಮಾಡುತ್ತಿವೆ. ಲೋಕಸಭೆ ಚುನಾವಣೆಗೆ ಕೆಲವು ತಿಂಗಳು ಬಾಕಿಯಿರುವಂತೆ ನಡೆಯುತ್ತಿರುವ ಕೊನೆಯ ಅಧಿವೇಶನ ಮುಗಿಯುವ ಒಂದು ದಿನವ ಮುನ್ನ ರಾಫೆಲ್​ ಒಪ್ಪಂದದ ಸಿಎಜಿ ವರದಿ ಇಂದು ಲೋಕಸಭೆಗೆ ಸಲ್ಲಿಕೆಯಾಗುತ್ತಿದೆ.

ರಾಫೆಲ್​  ಒಪ್ಪಂದದ ದರ ವಿವರವನ್ನು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಹಂಚಿಕೆಕೊಳ್ಳಲು ಸಾಧ್ಯವಿಲ್ಲ. ಅಲ್ಲದೇ, ಸರ್ಕಾರದಿಂದಲೂ ಸಾಕಷ್ಟು ಒತ್ತಡವಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ದರ ವಿವರವನ್ನು ಮರೆಮಾಚಿ, ಅವಧಿಯ ಲೆಕ್ಕಾಚಾರ ವಿವರವುಳ್ಳ ವರದಿ ನಾಳೆ ಸಲ್ಲಿಕೆಯಾಗುತ್ತಿದೆ ಎನ್ನಲಾಗಿದೆ.

ವರದಿಯಲ್ಲಿ ರಾಫೆಲ್​ ಜೆಟ್​ ಒಪ್ಪಂದದ 2007 ಮತ್ತು 2015ರ ಅವಧಿಯ ಬಿಡ್​ಗಳ ಹೋಲಿಕೆ ಮತ್ತು ಪ್ರಕ್ರಿಯೆ, ಕ್ರಮಗಳನ್ನು ಉಲ್ಲೇಖ ಮಾಡಲಾಗಿದೆ. 36 ವಿಮಾನಗಳ ಖರೀದಿಯಲ್ಲಿ ಸರ್ಕಾರದ ನಿರ್ಧಾರ ಹಾಗೂ ಯುಪಿಎ ಸರ್ಕಾರ ಅವಧಿಯಲ್ಲಿ 2007ರಲ್ಲಿ 18 ವಿಮಾನಗಳ ಖರೀದಿ ಸಂಬಂಧ ಕರೆದಿದ್ದ ಜಾಗತಿಕ ಟೆಂಡರ್​ ಮಾಹಿತಿ ಹಂಚಿಕೊಳ್ಳಲಾಗಿದೆ ಎನ್ನಲಾಗಿದೆ. ಇಂದು ಸಿಎಜಿ ಆಗಿರುವ ರಾಜೀವ್ ಮೆಹರಿಷಿ ಅವರು ರಾಫೆಲ್​ ಒಪ್ಪಂದದ ವೇಳೆ ಹಣಕಾಸು ಇಲಾಖೆ ಕಾರ್ಯದರ್ಶಿಯಾಗಿದ್ದರು.

ಈ ಸಂಬಂಧ ನೆನ್ನೆ ರಾಜೀವ್ ವಿರುದ್ಧ ಆರೋಪ ಮಾಡಿರುವ ಕಾಂಗ್ರೆಸ್​ ಹಿರಿಯ ಮುಖಂಡ ಕಪಿಲ್ ಸಿಬಾಲ್​, ರಾಜೀವ್ ಅವರು  ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರವನ್ನು ಉಳಿಸಲು ಯತ್ನಿಸುತ್ತಿದ್ದಾರೆ. ಈ ಮೂಲಕ ತಮ್ಮನ್ನು ತಾವೇ ರಕ್ಷಿಸಿಕೊಳ್ಳುತ್ತಿದ್ದಾರೆ. ಸಿಎಜಿ ಹೇಗೆ ಈ ಪ್ರಕರಣವನ್ನು ತನಿಖೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ