ಹೊಸದಿಲ್ಲಿ: 36 ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಸಂಬಂಧ ಇಂದು ಲೋಕಸಭೆಗೆ ಸಿಎಜಿ ವರದಿ ಸಲ್ಲಿಕೆಯಾಗಲಿದೆ. ಆದರೆ, ಮೂಲಗಳ ಪ್ರಕಾರ, ಒಪ್ಪಂದ ಖರೀದಿ ದರ ವಿವರವನ್ನು ತಿಳಿಸಲಾಗುವುದಿಲ್ಲ ಎನ್ನಲಾಗಿದೆ. ಈ ಒಪ್ಪಂದದಲ್ಲಿ ಸರ್ಕಾರ ಭ್ರಷ್ಟಾಚಾರ ಎಸಗಿದೆ ಎಂದು ವಿರೋಧ ಪಕ್ಷಗಳು ಬಲವಾಗಿ ಆರೋಪ ಮಾಡುತ್ತಿವೆ. ಲೋಕಸಭೆ ಚುನಾವಣೆಗೆ ಕೆಲವು ತಿಂಗಳು ಬಾಕಿಯಿರುವಂತೆ ನಡೆಯುತ್ತಿರುವ ಕೊನೆಯ ಅಧಿವೇಶನ ಮುಗಿಯುವ ಒಂದು ದಿನವ ಮುನ್ನ ರಾಫೆಲ್ ಒಪ್ಪಂದದ ಸಿಎಜಿ ವರದಿ ಇಂದು ಲೋಕಸಭೆಗೆ ಸಲ್ಲಿಕೆಯಾಗುತ್ತಿದೆ.
ರಾಫೆಲ್ ಒಪ್ಪಂದದ ದರ ವಿವರವನ್ನು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಹಂಚಿಕೆಕೊಳ್ಳಲು ಸಾಧ್ಯವಿಲ್ಲ. ಅಲ್ಲದೇ, ಸರ್ಕಾರದಿಂದಲೂ ಸಾಕಷ್ಟು ಒತ್ತಡವಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ದರ ವಿವರವನ್ನು ಮರೆಮಾಚಿ, ಅವಧಿಯ ಲೆಕ್ಕಾಚಾರ ವಿವರವುಳ್ಳ ವರದಿ ನಾಳೆ ಸಲ್ಲಿಕೆಯಾಗುತ್ತಿದೆ ಎನ್ನಲಾಗಿದೆ.
ವರದಿಯಲ್ಲಿ ರಾಫೆಲ್ ಜೆಟ್ ಒಪ್ಪಂದದ 2007 ಮತ್ತು 2015ರ ಅವಧಿಯ ಬಿಡ್ಗಳ ಹೋಲಿಕೆ ಮತ್ತು ಪ್ರಕ್ರಿಯೆ, ಕ್ರಮಗಳನ್ನು ಉಲ್ಲೇಖ ಮಾಡಲಾಗಿದೆ. 36 ವಿಮಾನಗಳ ಖರೀದಿಯಲ್ಲಿ ಸರ್ಕಾರದ ನಿರ್ಧಾರ ಹಾಗೂ ಯುಪಿಎ ಸರ್ಕಾರ ಅವಧಿಯಲ್ಲಿ 2007ರಲ್ಲಿ 18 ವಿಮಾನಗಳ ಖರೀದಿ ಸಂಬಂಧ ಕರೆದಿದ್ದ ಜಾಗತಿಕ ಟೆಂಡರ್ ಮಾಹಿತಿ ಹಂಚಿಕೊಳ್ಳಲಾಗಿದೆ ಎನ್ನಲಾಗಿದೆ. ಇಂದು ಸಿಎಜಿ ಆಗಿರುವ ರಾಜೀವ್ ಮೆಹರಿಷಿ ಅವರು ರಾಫೆಲ್ ಒಪ್ಪಂದದ ವೇಳೆ ಹಣಕಾಸು ಇಲಾಖೆ ಕಾರ್ಯದರ್ಶಿಯಾಗಿದ್ದರು.
ಈ ಸಂಬಂಧ ನೆನ್ನೆ ರಾಜೀವ್ ವಿರುದ್ಧ ಆರೋಪ ಮಾಡಿರುವ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಾಲ್, ರಾಜೀವ್ ಅವರು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವನ್ನು ಉಳಿಸಲು ಯತ್ನಿಸುತ್ತಿದ್ದಾರೆ. ಈ ಮೂಲಕ ತಮ್ಮನ್ನು ತಾವೇ ರಕ್ಷಿಸಿಕೊಳ್ಳುತ್ತಿದ್ದಾರೆ. ಸಿಎಜಿ ಹೇಗೆ ಈ ಪ್ರಕರಣವನ್ನು ತನಿಖೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.