ನವದೆಹಲಿ, ಫೆ.13- ಸಂಸತ್ ಬಜೆಟ್ ಅಧಿವೇಶನಕ್ಕಾಗಿ ಜನವೆರಿ 31ರಿಂದ ಆರಂಭವಾದ ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳನ್ನು ಇಂದು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಬಜೆಟ್ ಅಧಿವೇಶನದಲ್ಲಿ ಫೆಬ್ರುವರಿ 1ರಂದು 2019-2020ನೇ ಸಾಲಿನ ಮಧ್ಯಂತರ ಬಜೆಟ್ನ್ನು ಮಂಡಿಸಲಾಯಿತು. ನಂತರ ಬಜೆಟ್ ಅಧಿವೇಶನ ನಡೆಯಿತಾದರು ರಫೇಲ್ ಒಪ್ಪಂದ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಕಲಾಪದಲ್ಲಿ ಗದ್ದಲ ಸೃಷ್ಟಿಸಿದ್ದರಿಂದ ಉಭಯಸದನಗಳ ಕಲಾಪ ಸುಗಮವಾಗಿ ನಡೆಯದೇ ಪದೇ ಪದೇ ಮುಂದೂಡಲ್ಪಟ್ಟವು.
ಕೊನೆಯ ದಿನವಾದ ಇಂದು ಎರಡು ಸದನಗಳಲ್ಲೂ ಇದೇ ಪರಸ್ಥಿತಿ ಮರುಕಳಿಸಿತು. ಇದೆಲ್ಲದರ ನಡುವೆ ಸಂಸತ್ನಲ್ಲಿ ಕೆಲವು ಮಹತ್ವದ ಮಸೂದೆಗಳನ್ನು ಮಂಡಿಸಲಾಗಿದೆ.
ಲೋಕಸಭೆಯಲ್ಲಿ ಇಂದು ಅನಿಯಂತ್ರಿತ ಠೇವಣಿಗಳ ನಿಷೇಧ ಮಸೂದೆ-2018ಕ್ಕೆ ಅಂಗೀಕಾರ ನೀಡಲಾಯಿತು.
ರಾಜ್ಯಸಭೆಯಲ್ಲಿ 2019-2020ನೇ ಸಾಲಿಗಾಗಿ ಮಧ್ಯಂತರ ಬಜೆಟ್ ಹಣಕಾಸು ಮಸೂದೆಯನ್ನು ಯಾವುದೇ ಚರ್ಚೆ ಇಲ್ಲದೆ ಅನುಮೋದಿಸಲಾಯಿತು.
ಮೇಲ್ಮನೆಯಲ್ಲಿ ಇಂದು ಅನಿಯಂತ್ರಿತ ಠೇವಣಿಗಳ ನಿಷೇಧ ಮಸೂದೆ-2018ಕ್ಕೆ ಅಂಗೀಕಾರ ನೀಡಲಾಯಿತು. ಅಲ್ಲದೆ ಕುಷ್ಠರೋಗ ನಿರ್ಮೂಲನೆ ಮಸೂದೆಗೆ ಅಂಕಿತ ಹಾಕಲಾಯಿತು.