ಬೆಂಗಳೂರು,ಫೆ.13-ಶಾಸಕರೊಬ್ಬರ ಪುತ್ರನ ಮೂಲಕ ಪಕ್ಷಕ್ಕೆ ಸೇರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಮಿಷವೊಡ್ಡಿದ್ದಾರೆ ಎನ್ನಲಾದ ಪ್ರಕರಣ ಭಾರೀ ಕೋಲಾಹಲ ಸೃಷ್ಟಿಸಿರುವಾಗಲೇ ಈಗ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ.
ಕಳೆದ 7ರಂದು ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಐಬಿಯಲ್ಲಿ ಯಡಿಯೂರಪ್ಪ, ಶಾಸಕ ಶಿವನಗೌಡ ನಾಯಕ್ ಮತ್ತು ಶರಣಗೌಡರ ನಡುವೆ ನಡೆದಿರುವ ಮಾತುಕತೆಯ ಮುಂದುವರೆದ ಆಡಿಯೋ ಇದೀಗ ಬಹಿರಂಗಗೊಂಡಿದ್ದು, ಕೆಲವು ಸ್ಫೋಟಕ ಸತ್ಯಗಳು ಹೊರಬಿದ್ದಿವೆ.
ಸುಮಾರು 82 ನಿಮಿಷಗಳ ಆಡಿಯೋದಲ್ಲಿ ಬಿಎಸ್‍ವೈ, ಶಿವನಗೌಡ ನಾಯಕ್, ಪ್ರೀತಮ್‍ಗೌಡ ಮತ್ತು ಶರಣಗೌಡ ನಡೆಸಿರುವ ರಹಸ್ಯ ಮಾತುಕತೆಯಲ್ಲಿ ಶಾಸಕರಿಗೆ ರಾಜೀನಾಮೆ ನೀಡಲು 10 ಕೋಟಿ ಆಮಿಷವೊಡ್ಡಿರುವುದು ಬೆಳಕಿಗೆ ಬಂದಿದೆ.
ಮೊದಲು ನಿಮ್ಮ ತಂದೆಯವರನ್ನು ರಾಜೀನಾಮೆ ಕೊಡಲು ಒಪ್ಪಿಸಿ. ಮುಂಬೈನಲ್ಲಿ 10 ಶಾಸಕರು ಈಗಾಗಲೇ ಹೋಟೆಲ್‍ನಲ್ಲಿದ್ದಾರೆ. ನೀವು ಅಲ್ಲಿಗೆ ಹೋದರೆ, ಸಂಜೆಯೊಳಗೆ ಇಬ್ಬರು ಶಾಸಕರು ಬರುತ್ತಾರೆ. 15 ಶಾಸಕರು ಆದ ನಂತರ ಎಲ್ಲರೂ ಒಟ್ಟಾಗಿ ರಾಜೀನಾಮೆ ನೀಡುತ್ತಾರೆ ಎಂದು ಶರಣಗೌಡರಿಗೆ ಬಿಎಸ್‍ವೈ ಹೇಳುತ್ತಾರೆ.
ಮೊದಲು 10 ಕೋಟಿ ಹಣ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಹಣಕಾಸು ವ್ಯವಹಾರವನ್ನು ಬಿ.ವೈ.ವಿಜಯೇಂದ್ರ ನೋಡಿಕೊಳ್ಳುತ್ತಾರೆ. ಚುನಾವಣಾ ಖರ್ಚು-ವೆಚ್ಚ ನಮಗೆ ಇರಲಿ.ಮೊದಲು ನಿಮ್ಮ ತಂದೆಯನ್ನು ರಾಜೀನಾಮೆ ನೀಡಲು ಒಪ್ಪಿಸು.ಉಳಿದಿದ್ದನ್ನು ನಮಗೆ ಬಿಡು.
ಉಪಚುನಾವಣೆಯಲ್ಲಿ ತಂದೆಗೆ ಬದಲು ನೀನೆ ನಿಂತುಕೊ.ನಿನ್ನನ್ನು ಮಂತ್ರಿ ಮಾಡಲಾಗುವುದು.ಜೆಡಿಎಸ್‍ನಲ್ಲೇ ಇದ್ದರೆ ನಿನಗೆ ಭವಿಷ್ಯವಿಲ್ಲ. ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ಬಿಜೆಪಿ ಇರುವುದು ಅಷ್ಟೇ ಸತ್ಯ.ಲೋಕಸಭೆ ಚುನಾವಣೆ ನಂತರ ಜೆಡಿಎಸ್ ಎಲ್ಲಿರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಅಲ್ಲಿ ನಿಮಗೆ ರಾಜಕೀಯ ಭವಿಷ್ಯ ಸಿಗುವುದಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಲಿಂಗಾಯತ ಸಮುದಾಯವರನ್ನು ಮುಖ್ಯಮಂತ್ರಿ ಮಾಡಿದ ಕೀರ್ತಿ ನಿನಗೆ ಸಲ್ಲುತ್ತದೆ ಎಂದು ಶಿವನಗೌಡ ನಾಯಕ್ ಶರಣಗೌಡರಿಗೆ ಮನವರಿಕೆ ಮಾಡಿಕೊಡುತ್ತಾರೆ.
ಎಲ್ಲವನ್ನೂ ನೋಡಿಕೊಳ್ಳುತ್ತಾರೆ.ರಾಜೀನಾಮೆ ನೀಡಲು ಮುಂದಾದರೆ ಸ್ಪೀಕರ್ ರಮೇಶ್‍ಕುಮಾರ್ ತಕ್ಷಣವೇ ಅಂಗೀಕಾರ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಎಂದಾಗ ಮಧ್ಯಪ್ರವೇಶಿಸುವ ಯಡಿಯೂರಪ್ಪ, ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅಧಿವೇಶನ ನಡೆಯುವ ಸಂದರ್ಭದಲ್ಲಿ ರಾಜೀನಾಮೆ ಕೊಡಲು ಮುಂದೆ ಬಂದರೆ ಸ್ಪೀಕರ್ ಅಂಗೀಕರಿಸಲೇಬೇಕು. ಎಷ್ಟು ದಿನ ಅವರು ತಪ್ಪಿಸಿಕೊಂಡು ಹೋಗಲು ಸಾಧ್ಯ ಎಂದು ಪ್ರಶ್ನೆ ಮಾಡುತ್ತಾರೆ.
ಈ ವೇಳೆ ಶಿವನಗೌಡ ನಾಯಕ್ ಸ್ಪೀಕರ್ ಏನಾದರೂ ಆಟ ಆಡಿದರೆ ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬುದು ಈಗಾಗಲೇ ಸೆಟ್ಲುಮೆಂಟ್ ಆಗಿದೆ.ದೊಡ್ಡ ಲೆವೆಲ್‍ನಲ್ಲೇ ಇದು ನಡೆಯುತ್ತದೆ. ಪ್ರಧಾನಿ, ಅಮಿತ್ ಷಾ, ರಾಜ್ಯಪಾಲರು ನೋಡಿಕೊಳ್ಳುತ್ತಾರೆ.ನೀನು ತಲೆಕೆಡಿಸಿಕೊಳ್ಳಬೇಡ. ಹೇಗಿದ್ದರೂ ನೀನು ಮಂತ್ರಿಯಾಗುತ್ತೀಯ, ನಿನ್ನನ್ನೇ ಯಾದಗಿರಿ ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡಲಾಗುವುದು ಎಂಬ ಭರವಸೆಯನ್ನು ನೀಡುತ್ತಾರೆ.
ನೀನು ರಾಜೀನಾಮೆ ನೀಡಲು ಒಪ್ಪಿಕೊಂಡರೆ ರಾಯಚೂರಿನ ಮಾರ್ವಾಡಿಯಿಂದಲೂ ಸಂಜೆಯೊಳಗೆ 20 ಕೋಟಿ ನೀಡಲಾಗುವುದು. ನಿನಗೆ ಸಂಪೂರ್ಣವಾಗಿ ಸ್ವಾತಂತ್ರ್ಯ ನೀಡಿದ್ದೇವೆ. ಹೆಚ್ಚು ದಿನ ಯೋಚಿಸುತ್ತಾ ಕುಳಿತರೆ ಯಾವುದೂ ಪ್ರಯೋಜನವಾಗುವುದಿಲ್ಲ. ರಾಜಕೀಯದಲ್ಲಿ ಭವಿಷ್ಯ ಉಜ್ವಲವಾಗಬೇಕಾದರೆ ಕೆಲವು ಸಂದರ್ಭದಲ್ಲಿ ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಒತ್ತಡವನ್ನೂ ಹಾಕಿದ್ದಾರೆ.
ಯಡಿಯೂರಪ್ಪ ಒಂದು ಬಾರಿ ನಂಬಿದರೆ ಮುಗಿಯಿತು.ಯಾರಿಗೂ ಮೋಸ ಮಾಡುವ ವ್ಯಕ್ತಿಯಲ್ಲ. ನಾನು ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ ನಂತರ ಮಂತ್ರಿ ಮಾಡಿದರು.ನಂತರ ಉಪಚುನಾವಣೆಯಲ್ಲೂ ಗೆಲ್ಲಿಸಿಕೊಟ್ಟರು.ಸಾಹೇಬ್ರು ಒಂದು ಬಾರಿ ಮಾತು ಕೊಟ್ಟರೆ ಮುಗಿಯಿತು.ಕೈ ಬಿಡುವ ಪ್ರಶ್ನೆಯೇ ಇಲ್ಲ.
ನಿಮ್ಮ ತಂದೆಗೆ ವಯಸ್ಸಾಗಿದೆ.ನೀನು ಉಪಚುನಾವಣೆಗೆ ನಿಂತರೆ ಅವರೇ ಪ್ರಚಾರ ಮಾಡಿ ಗೆಲ್ಲಿಸಿಕೊಡುತ್ತಾರೆ, ತಲೆಕೆಡಿಸಿಕೊಳ್ಳಬೇಡ, ಆಗುವುದೆಲ್ಲ ಒಳ್ಳೆಯದಕ್ಕೆ ಎಂಬುದನ್ನು ತಿಳಿದು ರಾಜೀನಾಮೆ ಕೊಡಿಸುವಂತೆ ಮನವೊಲಿಸಬೇಕೆಂದು ಶಿವನಗೌಡ ನಾಯಕ್ ಹೇಳಿರುವುದು ಮೊಬೈಲ್‍ನಲ್ಲಿ ರೆಕಾರ್ಡ್ ಆಗಿದೆ.
ಈ ಸರ್ಕಾರದ ಬಗ್ಗೆ ಯಾರಿಗೂ ಇಷ್ಟವಿಲ್ಲ. ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯನ ಮಾತು ನಡೆಯುವುದಿಲ್ಲ. ವಿಪ್ಪು, ನೋಟಿಸು ಇದಕ್ಕೆ ಯಾರೊಬ್ಬರೂ ತಲೆ ಕೊಡಿಸಿಕೊಳ್ಳುವುದಿಲ್ಲ. ಲೋಕಸಭೆ ಚುನಾವಣೆ ನಂತರ ಸಿದ್ದರಾಮಯ್ಯನವರನ್ನು ಕಾಂಗ್ರೆಸ್‍ನಲ್ಲಿ ಮೂಲೆಗುಂಪು ಮಾಡುತ್ತಾರೆ. ನಿನ್ನ ಪಾಡಿಗೆ ನೀನು ಮುಂಬೈಗೆ ಹೊರಡು.ಅಲ್ಲಿ ವಿಜಯೇಂದ್ರ ಎಲ್ಲವನ್ನೂ ನೋಡಿಕೊಳ್ಳುತ್ತಾನೆ ಎಂದು ಯಡಿಯೂರಪ್ಪ ಮಾತನಾಡಿರುವುದು ಬಹಿರಂಗಗೊಂಡಿದೆ.
ಒಂದು ಹಂತದಲ್ಲಿ ಶರಣಗೌಡಗೆ ವಿಪರೀತ ಆಮಿಷವೊಡ್ಡಿರುವ ಬಿಜೆಪಿ ನಾಯಕರು ಕಾನೂನಿನ ಸಮಸ್ಯೆ ಎದುರಾದರೆ ನಾವೇ ನೋಡಿಕೊಳ್ಳುತ್ತೇವೆ ಎಂಬ ಭರವಸೆಯನ್ನೂ ನೀಡಿರುವುದು ಆಡಿಯೋದಲ್ಲಿ ದಾಖಲಾಗಿದೆ.