
ಬೆಂಗಳೂರು: ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ನಾಲ್ವರು ಶಾಸಕರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಯಮಯ್ಯ ಸ್ಪೀಕರ್ ರಮೇಶ್ಕುಮಾರ್ ಅವರಿಗೆ ದೂರು ಸಲ್ಲಿಸಿರುವುದು ಅತೃಪ್ತ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಅತೃಪ್ತ ಶಾಸಕರು ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ಅಪಾಯದ ಮುನ್ಸೂಚನೆ ಅರಿತಿರುವ ಅತೃಪ್ತರ ಆಪ್ತರು ಹಾಗೂ ಕಾನೂನು ತಜ್ಞರು ಮುಂದೆ ಎದುರಾಗಬಹುದಾದ ಅಪಾಯದ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಗೋಕಾಕ್ ಶಾಸಕನ ತಂಡ ಕಾಂಗ್ರೆಸ್ ಆಪ್ತರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದೆ.
ಒಂದು ವೇಳೆ ನಿಮ್ಮನ್ನು ಸ್ಪೀಕರ್ ಅನರ್ಹಗೊಳಿಸಿದರೆ ಆರು ವರ್ಷ ಚುನಾವಣೆಗೆ ನಿಲ್ಲುವಂತಿಲ್ಲ. ಇದರಿಂದ ರಾಜಕೀಯ ಭವಿಷ್ಯದ ಮೇಲೆ ತಾವೇ ಶಾಶ್ವತ ಚಪ್ಪಡಿ ಎಳೆದುಕೊಂಡಂತೆ ಆಗುತ್ತದೆ. ಈಗ ಬಂದಿರುವ ಸಂಕಟದಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಿ. ಕೂಡಲೇ ಸದನಕ್ಕೆ ಹಾಜರಾಗಿ. ಬಿಲ್ಗಳನ್ನು ಪಾಸ್ ಮಾಡುವ ಸಂದರ್ಭದಲ್ಲಿ ಹಾಜರಿರಿ. ಫೈನಾನ್ಸ್ ಬಿಲ್ ಸಂದರ್ಭದಲ್ಲೂ ಇರಿ. ಇದರಿಂದ ಬೀಸುವ ದೊಣ್ಣೆಯಿಂದ ಪಾರಾಗೋ ಸಾಧ್ಯತೆ ಇದೆ. ಆಮೇಲೆ ಸಿದ್ದರಾಮಯ್ಯ, ಕೆ.ಸಿ ವೇಣು ಗೋಪಾಲ್ ಅವರ ಮನವೊಲಿಸೋಣ. ಅನರ್ಹತೆ ಪಿಟೇಷನ್ ಸ್ಪೀಕರ್ ಅವರಿಂದ ಸದ್ಯಕ್ಕೆ ಪೆಂಡಿಂಗ್ ಇಡಿಸೋಣ. ಮನವಿ ಮಾಡಿ ನಿಮಗೆ ನೋಟೀಸ್ ನೀಡದಂತೆ ಪ್ರಯತ್ನಿಸಬಹುದು. ನೀವು ಸದನಕ್ಕೆ ಹಾಜರಾಗದಿದ್ರೆ ಮುಂದೇನೂ ಮಾಡೋಕ್ಕಾಗಲ್ಲ.
ನಿಮ್ಮ ರಾಜಕೀಯ ಭವಿಷ್ಯಕ್ಕೆ ನೀವೇ ಕಲ್ಲು ಚಪ್ಪಡಿ ಎಳೆದುಕೊಂಡಂತಾಗುತ್ತದೆ.
ಈಗ ರಾಜೀನಾಮೆ ಕೊಟ್ರೂ ಅಷ್ಟು ಸುಲಭವಾಗಿ ಸ್ವೀಕಾರ ಆಗಲ್ಲ ಎಂದು ಅತೃಪ್ತ ಶಾಸಕರ ಆಪ್ತರು ಹಾಗೂ ಕಾನೂನು ತಜ್ಞರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಈ ಕಾರಣಕ್ಕಾಗಿ ನಾಳೆಯಿಂದ ನಾಲ್ವರು ಶಾಸಕರು ಸದನಕ್ಕೆ ಹಾಜರಾಗುವ ಸಾಧ್ಯತೆ ಇದೆ. ಸ್ಪೀಕರ್ ವಿಚಾರಣೆ ನೋಟೀಸ್ ನೀಡುವ ಮೊದಲೇ ಸದನದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ. ಹಾಗೆನಾದರೂ ಅತೃಪ್ತರು ನಾಳೆ ಕಲಾಪಕ್ಕೆ ಬಂದ್ರೆ ಆಪರೇಷನ್ ಕಮಲಕ್ಕೆ ಪೋಸ್ಟ್ ಮಾರ್ಟಮ್ ಆದಂತೆ!