ನವದೆಹಲಿ, ಫೆ.13-ಫ್ರಾನ್ಸ್ನಿಂದ 58ಸಾವಿರ ಕೋಟಿ ರೂ. ವೆಚ್ಚದಲ್ಲಿ 36ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಪ್ರತಿನಿತ್ಯ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಸಂದರ್ಭದಲ್ಲೇ ಕಂಪ್ಟ್ರಾಲ್ಲೆರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಇಂದು ತನ್ನ ವರದಿಯನ್ನು ಸಂಸತ್ನಲ್ಲಿ ಮಂಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ನಡೆಸಿರುವ ರಫೇಲ್ ವ್ಯವಹಾರವೂ 2007ರಲ್ಲಿ ಯುಪಿಎ ಸರಕಾರದ ಉದ್ದೇಶಿತ ವ್ಯವಹಾರಕ್ಕಿಂತಲೂ ಶೇಕಡಾ 2.86ರಷ್ಟು ಕಡಿಮೆಯಿದೆ ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ.
ಯುಪಿಎ ಸರಕಾರದ ವರದಿಯಲ್ಲಿ ಅತ್ಯಂತ ಕಡಿಮೆ ದರಕ್ಕೆ ಈ ವ್ಯವಹಾರ ಕುದುರಿತ್ತು. ಆದರೆ ಎನ್ಡಿಎ ಸರಕಾರ ಭಾರೀ ಅವ್ಯವಹಾರ ನಡೆಸಲು ದುಬಾರಿ ಬೆಲೆಗೆ ಈ ಒಪ್ಪಂದ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ಇತರ ಮುಖಂಡರು ನೀಡಿರುವ ಹೇಳಿಕೆಗೆ ಸಿಎಜಿ ವರದಿಯಲ್ಲಿ ನ ಅಂಶಗಳು ತೀರಾ ವ್ಯತಿರಿಕ್ತವಾಗಿದ್ದು ಇದರಿಂದ ಪ್ರತಿಪಕ್ಷಗಳಿಗೆ ಮುಖಭಂಗವಾಗಿದೆ.
ರಫೇಲ್ ಜೆಟ್ ವ್ಯವಹಾರಕ್ಕೆ ಸಂಬಂಧ ಪಟ್ಟಂತೆ ಕಳೆದ ತಿಂಗಳಿಂದ ತೀವ್ರ ವಾಗ್ದಾಳಿಗೆ ಗುರಿಯಾಗಿದ್ದ ಮೋದಿ ಸರಕಾರಕ್ಕೆ ಸಿಎಜಿ ವರದಿಯಲ್ಲಿನ ಅಂಶಗಳು ದೊಡ್ಡ ರಿಲೀಫ್ ನೀಡಿದೆ.
ಭಾರತದ ನಿರ್ದಿಷ್ಟ ವರ್ಧನೆಗೆ ಸಂಬಂಧಿಸಿದಂತೆ ಹೇಳುವುದಾದರೆ ಈ ವ್ಯವಹಾರವು ಶೇ. 17.08ರಷ್ಟು ಕಡಿಮೆಯಾಗಿದೆ ಎಂಬ ಅಂಶವನ್ನು ಸಹ ಮಹಾಲೇಖಪಾಲರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಎಂಜಿನಿಯರಿಂಗ್ ಸ್ಪೋರ್ಟ್ ಪ್ಯಾಕೇಜ್ ಮತ್ತು ಸಾಮಾಥ್ರ್ಯ ಆಧಾರಿತ ವಿವರಣೆ ಬಗ್ಗೆ ತಿಳಿಸುವುದಾದರೆ ಈ ವ್ಯವಹಾರವು ಶೇ. 6.54ರಷ್ಟು ಹೆಚ್ಚಾಗಿದೆ ಎಂದು ಸಹ ಸಿಎಜಿ ವರದಿ ವಿವರಿಸಿದೆ.
2007ರಲ್ಲಿ ಆಗಿನ ಯುಪಿಎ ಸರಕಾರ ರಫೇಲ್ ಯುದ್ಧವಿಮಾನಗಳನ್ನು ಖರೀದಿಸಲು ಮಾತುಕತೆ ನಡೆಸಿತ್ತು. ಆದರೆ ಈಗಿನ ಎನ್ಡಿಎ ಸರಕಾರ ಮಾಡಿಕೊಂಡಿರುವ ಒಪ್ಪಂದ ಶೇ. 2.86ರಷ್ಟು ಅಗ್ಗವಾಗಿದೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ರಫೇಲ್ ಒಪ್ಪಂದ ವಿಷಯದಲ್ಲಿ ಎಂದಿನಿಂದಲೂ ಸಮರ್ಥನೆಗಳನ್ನು ನೀಡುತ್ತಲೇ ಬಂದಿದ್ದ ಕೇಂದ್ರ ಸರಕಾರಕ್ಕೆ ಮಹಾಲೇಖಪಾಲರ ವರದಿಯೂ ಮತ್ತಷ್ಟು ಪುಷ್ಟಿ ನೀಡಿದೆ.
ಮಹಾಮೈತ್ರಿ ಸುಳ್ಳು ಸಾಬೀತು: ಜೇಟ್ಲಿ ಸಿಎಜಿ ವರದಿ ಕುರಿತು ಪ್ರಸ್ತಾಪಿಸಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕೊನೆಗೂ ಸತ್ಯಕ್ಕೆ ಜಯ ಲಭಿಸಿದೆ ಎಂದಿದ್ದಾರೆ.
ವರದಿಯಲ್ಲಿನ ಅಂಶಗಳು ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ಮಹಾಮೈತ್ರಿಯ ಆರೋಪಗಳನ್ನು ಸುಳ್ಳು ಎಂದು ಸಾಬೀತು ಮಾಡಿದೆ.