ಖ್ಯಾತ ನಿರ್ಮಾಪಕಿ ಜಯಶ್ರೀ ದೇವಿ ಇಂದು ಹೈದ್ರಾಬಾದ್‍ನಲ್ಲಿ ನಿಧನ

ಬೆಂಗಳೂರು, ಫೆ.13- ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕಿ ಜಯಶ್ರೀ ದೇವಿ ಅವರು ಹೃದಯಾಘಾತದಿಂದ ಇಂದು ಬೆಳಗ್ಗೆ ಹೈದ್ರಾಬಾದ್‍ನ ಅಪೋಲೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

1995ರಲ್ಲಿ ಡಾ. ವಿಷ್ಣುವರ್ಧನ್, ಕುಮಾರ್‍ಗೋವಿಂದ್ ನಟಿಸಿದ್ದ ಕೋಣ ಇದೈತೆ ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಜಯಶ್ರೀ ಅವರು ಇದುವರೆಗೂ 20ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ.

ಕೋಣ ಇದೈತೆ ಚಿತ್ರದ ನಂತರ ಶಶಿಕುಮಾರ್, ದೇವರಾಜ್, ಸಿತಾರಾ ಅಭಿನಯದ ಭವಾನಿ ಸಿನಿಮಾವನ್ನು ನಿರ್ದೇಶಿಸಿದ್ದರು.

ಭವಾನಿ ಚಿತ್ರದ ನಂತರ ಪೂರ್ಣ ಪ್ರಮಾಣವಾಗಿ ನಿರ್ಮಾಣದತ್ತಲೇ ಗಮನ ಹರಿಸಿದ ಜಯಶ್ರೀ ದೇವಿ ಅವರು, ಶಿವರಾಜ್‍ಕುಮಾರ್ ಅಭಿನಯದ ನಮ್ಮೂರ ಮಂದಾರ ಹೂವೇ, ಗಡಿಬಿಡಿ ಕೃಷ್ಣ, ಪ್ರೇಮ ರಾಗ ಹಾಡು ಗೆಳತಿ, ಡಾ.ವಿಷ್ಣುವರ್ಧನ್ ಅಭಿನಯಿಸಿದ್ದ ಹಬ್ಬ , ನಿಶ್ಯಬ್ದ, ಅಂಬರೀಷ್ ನಟನೆಯ ಶ್ರೀ ಮಂಜುನಾಥ, ವಂದೇ ಮಾತಾರಂ, ಬಂಗಾರದ ಮನೆ, ಅಮೃತವರ್ಷಿಣಿ, ದೇವರು ವರವನು ಕೊಟ್ರೆ ಚಿತ್ರಗಳಿಗೆ ಬಂಡವಾಳ ಹೂಡಿದ್ದಾರೆ.

ಜಯಶ್ರೀದೇವಿ ಅವರು ಉಪೇಂದ್ರ, ಕಿಚ್ಚ ಸುದೀಪ್ ನಟಿಸಿದ್ದ ಮುಕುಂದ ಮುರಾರಿ ಹಾಗೂ ದರ್ಶನ್‍ರ ಕುರುಕ್ಷೇತ್ರ ಚಿತ್ರಗಳಿಗೆ ಕಾರ್ಯಕಾರಿ ನಿರ್ಮಾಪಕಿಯಾಗಿದ್ದಾರೆ.

ಇಂದು ಸಂಜೆ ವೇಳೆಗೆ ಜಯಶ್ರೀದೇವಿಯ ಪಾರ್ಥಿವ ಶರೀರ ಬೆಂಗಳೂರಿಗೆ ಬರಲಿದ್ದು ನಾಳೆ ಯಲಹಂಕದ ಚಿತಾಗಾರದಲ್ಲಿ ಅವರ ಅಂತಿಮ ಕಾರ್ಯಗಳು ನಡೆಯಲಿದೆ ಎಂದು ನಿಕಟವರ್ತಿ ನಟ ವಾಸು ಅವರು ತಿಳಿಸಿದ್ದಾರೆ.

ಜಯಶ್ರೀ ಅವರ ನಿಧನಕ್ಕೆ ಕರ್ನಾಟಕ ವಾಣಿಜ್ಯಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ನಿರ್ಮಾಪಕ ಮುನಿರತ್ನ ಸೇರಿದಂತೆ ಕಲಾವಿದರು ಹಾಗೂ ತಂತ್ರಜ್ಞರು ಕಂಬನಿ ಮಿಡಿದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ