ಪ್ರಯಾಗ್ರಾಜ್, ಫೆ.13- ಮಹಾಕುಂಭಮೇಳ ನಡೆಯುತ್ತಿರುವ ಉತ್ತರ ಪ್ರದೇಶದ ಪ್ರಯಾಗ್ ರಾಜ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜತೆ ಭೇಟಿ ನೀಡಿದ್ದಾರೆ. ತಮ್ಮ ದಿನಪೂರ್ತಿ ಭೇಟಿ ಸಂದರ್ಭದಲ್ಲಿ ಅಮಿತ್ ಷಾ ಹಲವಾರು ಧಾರ್ಮಿಕ ಮುಖಂಡರು ಮತ್ತು ಸಾಧು-ಸಂತರೊಂದಿಗೆ ಚರ್ಚಿಸಲಿದ್ದಾರೆ.
ಈಗ ಕುಂಭಮೇಳ ರಾಜಕೀಯ ಪಕ್ಷಗಳ ಪಾಲಿಗೆ ಅತಿ ದೊಡ್ಡ ಪ್ರಚಾರ ಸ್ಥಳವಾಗಿ ಹೊರಹೊಮ್ಮಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಅತಿ ಶೀಘ್ರದಲ್ಲೇ ಕುಂಭಮೇಳಕ್ಕೆ ಭೇಟಿ ನೀಡಿ ಪವಿತ್ರ ಸ್ನಾನ ಮಾಡಲಿದ್ದಾರೆ.
ಕುಂಭಮೇಳದಲ್ಲಿ ಪ್ರತಿಷ್ಠಾಪಿಸಲಾಗಿರುವ 150 ಅಡಿ ಎತ್ತರದ ತ್ರಿಶೂಲವನ್ನುಅಮಿತ್ ಷಾ ವೀಕ್ಷಿಸಲಿದ್ದಾರೆ.ಅಮಿತ್ ಷಾ ಭೇಟಿ ನಂತರ ಮೋದಿ ಕುಂಭಮೇಳಕ್ಕೆ ಆಗಮಿಸುವ ದಿನಾಂಕ ನಿಗದಿಯಾಗಲಿದೆ.
ಇದೇ ವೇಳೆ ಕುಂಭಮೇಳದಿಂದ ಆಖಾಡಗಳು ಹಿಂದಿರುಗಲು ಆರಂಭಿಸಿವೆ. ಕುಂಭದಲ್ಲಿ ಮುಂದಿನ ಪ್ರಮುಖ ಪುಣ್ಯಸ್ನಾನ ಇದೇ 19ರ ಮಾಘ ಪೌರ್ಣಮಿಯಂದು ನಡೆಯಲಿದೆ.
ಈಗಾಗಲೇ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಅಮಿತ್ ಷಾ ಈಗ ಉತ್ತರ ಪ್ರದೇಶದ ಕಡೆ ಮುಖ ಮಾಡಿದ್ದಾರೆ. ಅದರಲ್ಲೂ ಅತಿ ಹೆಚ್ಚು ಜನರು ಸೇರುತ್ತಿರುವ ಕುಂಭಮೇಳದಲ್ಲಿ ಜನರನ್ನು ಸೆಳೆಯಲು ಅಮಿತ್ ಷಾ ಮುಂದಾಗಿದ್ದಾರೆ.
ಕುಂಭಮೇಳ ಈಗ ರಾಜಕೀಯ ಪಕ್ಷಗಳಿಗೆ ಪ್ರಮುಖ ವೇದಿಕೆಯಾಗಿ ಪರಿವರ್ತನೆಗೊಂಡಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕುಂಭಮೇಳಕ್ಕೆ ಬಂದು ಪವಿತ್ರ ಸ್ನಾನ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ದಿನಾಂಕ ನಿಗದಿಯಾಗಿಲ್ಲ.]
ಸಮಾಜವಾದಿ ಪಕ್ಷದ ನಾಯಕರು ಕೂಡ ಕುಂಭಮೇಳದಲ್ಲಿ ರಾಜಕೀಯ ಪ್ರಚಾರ ಕೈಗೊಳ್ಳಲು ಮುಂದಾಗಿದ್ದರು.