ಬೆಂಗಳೂರು, ಫೆ.13-ವಿವಾದಿತ ಧ್ವನಿಸುರುಳಿ ಬಗ್ಗೆ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆಯನ್ನು ವಿರೋಧಿಸಿ ವಿಧಾನಸಭೆಯಲ್ಲಿ ಬಿಜೆಪಿ ಧರಣಿ ಆರಂಭಿಸಿತು.
ಎಸ್ಐಟಿ ತನಿಖೆಗೆ ಬದಲಾಗಿ ಹಕ್ಕುಬಾಧ್ಯತಾ ಸಮಿತಿ, ಸದನ ಸಮಿತಿ, ಇಲ್ಲವೇ ಹೈಕೋರ್ಟ್ನ ಹಾಲಿ ನ್ಯಾಯಾಧೀಶರು ಸೇರಿದಂತೆ ಯಾವುದಾದರೊಂದು ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಹಗಲು-ರಾತ್ರಿ ಧರಣಿ ನಡೆಸುವುದಾಗಿ ಪ್ರಕಟಿಸಿ ಬಿಜೆಪಿ ಶಾಸಕರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿದರು.
ಸದನ ಸಮಾವೇಶಗೊಳ್ಳುವ ಮುನ್ನ ಸಭಾಧ್ಯಕ್ಷ ರಮೇಶ್ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಧಾನವೂ ವಿಫಲವಾಗಿತ್ತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಆಡಳಿತ ಮತ್ತು ಪ್ರತಿಪಕ್ಷದ ಮುಖಂಡರು ಸಂಧಾನ ಸಭೆಯಲ್ಲಿ ಪಾಲ್ಗೊಂಡಿದ್ದರು.
ಬಿಜೆಪಿ ನಾಯಕರು ಎಸ್ಐಟಿ ತನಿಖೆ ವಿರೋಧಿಸಿ ಬೇರೆ ರೀತಿಯ ತನಿಖೆಯಾಗಬೇಕು ಎಂದು ಪಟ್ಟು ಹಿಡಿದಿದ್ದು, ಸರ್ಕಾರವೂ ಕೂಡ ಎಸ್ಐಟಿ ತನಿಖೆ ಮಾಡಿಸುವ ನಿಲುವಿಗೆ ಅಂಟಿಕೊಂಡಿದ್ದರಿಂದ ಸಂಧಾನ ಸಭೆ ವಿಫಲವಾಗಿತ್ತು.
ನಂತರ ಸದನ ಸಮಾವೇಶಗೊಂಡಾಗ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಸಭಾಧ್ಯಕ್ಷರನ್ನು ಉದ್ದೇಶಿಸಿ ಮಾತನಾಡುತ್ತಾ, ತಾವು ಬಹಳ ಪ್ರಯತ್ನಪಟ್ಟು ಸರ್ಕಾರಕ್ಕೆ ಮರುಪರಿಶೀಲಿಸುವಂತೆ ಸಲಹೆ ನೀಡಿದ್ದಿರಿ. ಆದರೂ ಸರ್ಕಾರ ಹಠಮಾರಿತನದಿಂದ ಎಸ್ಐಟಿ ತನಿಖೆಯೇ ಆಗಬೇಕೆಂದು ಪಟ್ಟು ಹಿಡಿದಿದೆ. ನಾವು ಹಕ್ಕುಬಾಧ್ಯತಾ ಸಮಿತಿ, ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ಹಾಗೂ ಸದನ ಸಮಿತಿ ಸೇರಿದಂತೆ ಯಾವುದಾದರೊಂದು ಸಮಿತಿಯಿಂದ ತನಿಖೆ ನಡೆಸುವಂತೆ ಸಲಹೆ ನೀಡಿದರೂ ಪರಿಗಣಿಸಲಿಲ್ಲ.
ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಳ್ಳುವ ಅಪೇಕ್ಷೆ ಇತ್ತು. ಆದರೆ ಸರ್ಕಾರ ಹಠಮಾರಿತನ ತೋರಿದ್ದರಿಂದ ಅನಿವಾರ್ಯವಾಗಿ ಹಗಲು-ರಾತ್ರಿ ಧರಣಿ ಕುಳಿತು ಹೋರಾಟ ಮಾಡಬೇಕಿದೆ ಎಂದು ಘೋಷಿಸಿದರು.
ನಂತರ ಬಿಜೆಪಿ ಶಾಸಕರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು.
ಈ ಹಂತದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಸಭಾಧ್ಯಕ್ಷರ ಮೇಲೆ ಆರೋಪ ಕೇಳಿ ಬಂದಿರುವ ಧ್ವನಿಸುರುಳಿ ಬಗ್ಗೆ ಎಸ್ಐಟಿ ತನಿಖೆಯೇ ಸೂಕ್ತವಾದದ್ದು ಎಂದು ಬಲವಾಗಿ ಸಮರ್ಥಿಸಿಕೊಂಡರು.
ಬಿಜೆಪಿ ಶಾಸಕರ ಧರಣಿಯ ನಡುವೆಯೇ ಸಭಾಧ್ಯಕ್ಷರು ಶಾಸನ ರಚನಾ ಕಲಾಪವನ್ನು ಕೈಗೆತ್ತಿಕೊಂಡು ವಿಧೇಯಕಗಳನ್ನು ಮಂಡಿಸಲು ಅವಕಾಶ ಮಾಡಿಕೊಟ್ಟರು.
ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ಅವರು ಮಂಡಿಸಿದ ವಿಧೇಯಕಗಳು ಚರ್ಚೆಯಿಲ್ಲದೆ ಧ್ವನಿಮತದ ಅಂಗೀಕಾರವನ್ನು ಪಡೆದವು.
ಬಿಜೆಪಿ ಶಾಸಕರ ಧರಣಿ ಮುಂದುವರೆದು ಸದನದಲ್ಲಿ ಗದ್ದಲ ವಾತಾವರಣ ಉಂಟಾದ್ದರಿಂದ ಸಭಾಧ್ಯಕ್ಷ ರಮೇಶ್ಕುಮಾರ್ ಸದನ ಕಾರ್ಯಕಲಾಪವನ್ನು ಭೋಜನವಿರಾಮಕ್ಕೆ ಮುಂದೂಡಿದರು.
ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ಶಾಸಕ ಮಾಧುಸ್ವಾಮಿ, ಸದನದಲ್ಲಿ ಬಿಜೆಪಿಯ 104 ಮಂದಿ ಸದಸ್ಯರಿದ್ದೇವೆ. ಸದನದ ಹಾಗೂ ನಿಮ್ಮ ಗೌರವ ಕಾಪಾಡಬೇಕೆಂದು ನಾವು ಸಹಕರಿಸಿದ್ದೆವು. ಹೆದರಿಕೊಂಡು ಕುಳಿತಿರಲಿಲ್ಲ. ನಾವು ಹೇಡಿಗಳೂ ಅಲ್ಲ. ಸರಿಯೋ-ತಪ್ಪೋ ವಿಧಾನಸಭೆ ನಡೆಸಬೇಕೆಂಬ ಅಪೇಕ್ಷೆ ಹೊಂದಿದ್ದೆವು. ಅಧ್ಯಕ್ಷರಿಗೆ ಅವಮಾನವಾಗಬಾರದು ಎಂಬುದು ನಮ್ಮ ಉದ್ದೇಶವಾಗಿತ್ತು. ಸಭಾಧ್ಯಕ್ಷರೇ ತಾವೂ ಬಹಳ ಪ್ರಯತ್ನ ಪಟ್ಟಿದ್ದೀರಿ. ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯಲಿಲ್ಲ. ಅಂದರೆ ನಾವು ಕೂಡ ಹಿಂದೆ ಸರಿಯುವುದಿಲ್ಲ. ಮುಖ್ಯಮಂತ್ರಿ ಅಧೀನದ ಎಸ್ಐಟಿ ತನಿಖೆಗೆ ಒಪ್ಪಲು ಸಾಧ್ಯವಿಲ್ಲ. ನಾವು ಹೋರಾಟ ಮಾಡಿ ಬಂದವರು. ಹೋರಾಟ ಮಾಡುವ ಶಕ್ತಿ ಇದೆ ಎಂದು ಹೇಳಿದರು.
ಈ ನಡುವೆ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ವಿರೋಧ ಪಕ್ಷವನ್ನು ಬಗ್ಗುಬಡಿಯಲು ಎಸ್ಐಟಿ ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.