ಬೆಂಗಳೂರು, ಫೆ.12- ನಗರದ ಸೌಂದರ್ಯ ಹಾಳಾಗುತ್ತಿರುವುದಕ್ಕೆ ಜಲ ಮಂಡಳಿ ಅಧಿಕಾರಿಗಳಿಗೆ ಮೊದಲ ಬಹುಮಾನ ನೀಡಬೇಕು.ಅವರು ಮಾಡಿದ ತಪ್ಪಿಗೆ ನಾವು 198 ಸದಸ್ಯರು ತಲೆ ತಗ್ಗಿಸುವಂತಾಗಿದೆ.ಈ ಮಂಡಳಿ ಮೇಲೆ ಹಿಡಿತ ಇಲ್ಲದಿರೋದೆ ಇದಕ್ಕೆ ಕಾರಣ. ಹಾಗಾಗಿ ಜಲಮಂಡಳಿಯನ್ನು ಪಾಲಿಕೆ ಹಿಡಿತಕ್ಕೆ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ವಾಗ್ದಾಳಿ ನಡೆಸಿದರು.
ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಕುರಿತಂತೆ ಜಲಮಂಡಳಿ ಅಧ್ಯಕ್ಷ ತುಷಾರ್ಗಿರಿನಾಥ್ ನೇತೃತ್ವದಲ್ಲಿಂದು ನಡೆದ ಪಾಲಿಕೆ ವಿಶೇಷ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಳೆಯಾಗದಿದ್ದರೆ ಕಾವೇರಿ ಮತ್ತು ಕೃಷ್ಣಕೊಳ್ಳದಲ್ಲಿ ನೀರು ಹರಿಯಲ್ಲ. ಆದರೆ, ನಮ್ಮ ನಗರದ ರಾಜಕಾಲುವೆಗಳಲ್ಲಿ ಪ್ರತಿನಿತ್ಯ ಕಲುಷಿತ ನೀರು ಯಥೇಚ್ಛವಾಗಿ ಹರಿಯುತ್ತಿದೆ.ಇದೇ ನೀರನ್ನು ಜಲಮಂಡಳಿಯವರು ತಮಿಳುನಾಡಿಗೆ ಬಿಡುತ್ತಾರೆ.ಬೆಳ್ಳಂದೂರು ಮತ್ತು ವರ್ತೂರು ಕೆರೆಗಳು ಕಲುಷಿತಗೊಳ್ಳಲು ಜಲಮಂಡಳಿ ಅಧಿಕಾರಿಗಳು ಕಾರಣ.ಆದರೆ, ಹಸಿರು ನ್ಯಾಯಾಲಯ ಬಿಬಿಎಂಪಿ ಹಾಗೂ ಸರ್ಕಾರಕ್ಕೆ ದಂಡ ಹಾಕಿದೆ.ಜಲಮಂಡಳಿ ಮಾಡಿದ ತಪ್ಪಿಗೆ ನಾವು ತಲೆ ತಗ್ಗಿಸಬೇಕಾಗಿದೆ. ನೀರು ಕಲುಷಿತಗೊಳ್ಳದಿರಲು ಜಲಮಂಡಳಿ ಪಾಲಿಕೆ ವ್ಯಾಪ್ತಿಗೆ ಬರಬೇಕು ಎಂದು ಹೇಳಿದರು.
ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಾವೇರಿ 5ನೆ ಹಂತದಿಂದ 10 ಟಿಎಂಸಿ ನೀರು ಬರಬೇಕು.ಎತ್ತಿನಹೊಳೆ ಯೋಜನೆಯಿಂದ 1.8 ಟಿಎಂಸಿ ನೀರು ಬರಬೇಕಿದೆ. ಈ ಯೋಜನೆಯನ್ನು ಯಾವಾಗ ಪೂರೈಸ್ತೀರಾ.ನಮ್ಮ ಪಾಲಿನ ನೀರನ್ನು ಯಾವಾಗ ಕೊಡ್ತೀರ ಎಂಬುದನ್ನು ಸ್ಪಷ್ಟಪಡಿಸಿ ಎಂದು ಒತ್ತಾಯಿಸಿದರು.
ಎತ್ತಿನಹೊಳೆ ಯೋಜನೆಯಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಸಂಪರ್ಕ ಕಲ್ಪಿಸಿ ಅಲ್ಲಿಂದ ನಮಗೆ ನೀರು ಕೊಡಬೇಕು.ಆದರೆ ಆ ಜಲಾಶಯವೇ ಕಲುಷಿತಗೊಂಡಿದೆ.ಸಮಸ್ಯೆ ಯಾವಾಗ ಬಗೆಹರಿಸುತ್ತೀರ ಎಂದು ಪ್ರಶ್ನಿಸಿದರು.
ಬಿಬಿಎಂಪಿಗೆ ಸೇರಿದ 110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸಬೇಕು.ಈ ಯೋಜನೆ ಆಮೆಗತಿಯಲ್ಲಿ ಸಾಗಿದೆ.ಯಾವಾಗ ನೀರು ಕೊಡ್ತೀರ? ನೀರು ಶುದ್ಧೀಕರಣ ಘಟಕಗಳು ಶೋಪೀಸ್ಗಳಂತಾಗಿವೆ. ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು (ಎಸ್ಟಿಪಿ) ಎಷ್ಟು ಕೆಲಸ ಮಾಡುತ್ತಿವೆ? ಇನ್ನೂ ಎಷ್ಟು ಎಸ್ಟಿಪಿ ಘಟಕಗಳನ್ನು ಸ್ಥಾಪಿಸಬೇಕು ಎಂದುಕೊಂಡಿದ್ದೀರಾ ಎಂಬ ಬಗ್ಗೆ ವಿವರ ಕೊಟ್ಟು ಈ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಗ್ಗಿಸಲು ಏನೇನು ಕ್ರಮ ಕೈಗೊಂಡಿದ್ದೀರ ಎಂಬುದರ ಮಾಹಿತಿ ನೀಡಿ ಎಂದು ಪದ್ಮನಾಭರೆಡ್ಡಿ ಒತ್ತಾಯಿಸಿದರು.
ಅಧಿಕಾರಿ ನಿಯೋಜನೆ ಮಾಡಿ: ಇದಕ್ಕೂ ಮುನ್ನ ಮಾತನಾಡಿದ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಅವರು ಭವಿಷ್ಯದಲ್ಲಿ ಕುಡಿಯುವ ನೀರನ್ನು ಚಿನ್ನ ಕಾಪಾಡುವಂತೆ ಕಾಪಾಡಬೇಕಾದ ಕಾಲ ಬರಲಿದೆ. ಹಾಗಾಗಿ ನೀವು ನೀರಿನ ಲೀಕೇಜ್ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಗರಕ್ಕೆ ಸರಬರಾಜಾಗುವ ಸಾವಿರ ಎಂಎಲ್ಡಿ ನೀರು ಸಾಕಾಗುತ್ತಿಲ್ಲ. ಒಂದು ಲೀಟರ್ ಲೀಕೇಜ್ ಆದರೂ ಪ್ರಮಾದವಾಗುತ್ತದೆ. ಬಿಬಿಎಂಪಿ ಮತ್ತು ಜಲಮಂಡಳಿ ನಡುವೆ ಸಮನ್ವಯ ಇಲ್ಲದೆ ಇರುವುದೇ ಇದಕ್ಕೆ ಕಾರಣ. ಹಾಗಾಗಿ ಒಬ್ಬ ಜಲಮಂಡಳಿ ಅಧಿಕಾರಿಯನ್ನು ಬಿಬಿಎಂಪಿಗೆ ನಿಯೋಜನೆ ಮಾಡಿ ಎಂದು ಸಲಹೆ ನೀಡಿದರು.
ನಗರದಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಕೊಳಚೆ ನೀರನ್ನೇ ಸಂಸ್ಕರಿಸಿ ಕುಡಿಯುವ ಕಾಲ ಬರುತ್ತದೆ.ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ.ಮೋದಿ ವರ್ಸಸ್ ಮಹಾಘಟಬಂಧನ್ ನಡುವೆ ಬಿಗ್ಫೈಟ್ ಇರುತ್ತದೆ. ಕೂಡಲೇ ಕೇಂದ್ರ ಸರ್ಕಾರ ನಗರದ ಕುಡಿಯುವ ನೀರಿನ ಬವಣೆ ತಪ್ಪಿಸಲು ಸ್ಥಾಪಿಸಿರುವ ಅಮೃತ್ ಯೋಜನೆಯಡಿ ಹಣ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು.
ನೀತಿ-ಸಂಹಿತೆ ಜಾರಿಯಾದರೆ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರನ್ನು ಕೊಡುವುದಕ್ಕಾಗುವುದಿಲ್ಲ. ಹಾಗಾಗಿ ಕುಡಿಯುವ ನೀರಿನ ಸಮಸ್ಯೆಗೆ ಏನು ಕ್ರಮ ಕೈಗೊಳ್ಳುತ್ತೀರ ಎಂದು ಪ್ರಶ್ನಿಸಿದರು.
ಕೆರೆಗಳಿಗೆ ಕೈಗಾರಿಕಾ ತ್ಯಾಜ್ಯ ಸೇರದಂತೆ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ತಕ್ಷಣ ಗಮನ ಕೊಡಬೇಕು ಎಂದು ಒತ್ತಾಯಿಸಿದರು.
ನಿರಾಸಕ್ತಿ: ಈಗಾಗಲೇ ನಗರದ ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ.ತಮ್ಮ ತಮ್ಮ ವಾರ್ಡ್ ವ್ಯಾಪ್ತಿಯ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಲೆಂದೇ ಇಂದು ವಿಶೇಷ ಸಭೆ ಕರೆಯಲಾಗಿತ್ತು.ಆದರೆ, ಇದೆಲ್ಲದರ ಬಗ್ಗೆ ಚರ್ಚಿಸಿ ಸಲಹೆ ನೀಡಬೇಕಾದ ಸದಸ್ಯರುಗಳೇ ಸಭೆಯಲ್ಲಿ ಹೆಚ್ಚು ಮಂದಿ ಗೈರಾಗಿದ್ದುದು ಎದ್ದು ಕಾಣುತ್ತಿತ್ತು.ನಗರದ ನೀರಿನ ಸಮಸ್ಯೆ ಬಗ್ಗೆ ಅವರ ನಿರಾಸಕ್ತಿಯನ್ನು ಇದು ತೋರುತ್ತಿತ್ತು.