ತುಮಕೂರು, ಫೆ.12-ವಿಕಲಚೇತನ ಮಾಸಾಶನ ನೀಡಲು ಅಧಿಕಾರಿಯ ವರ್ತನೆಯಿಂದ ಬೇಸತ್ತ ವಿಶೇಷಚೇತನರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಕೋರಾ ಹೋಬಳಿಯ ರಂಗನಾಯಕನ ಪಾಳ್ಯದಲ್ಲಿ ನಡೆದಿದೆ.
ಧರಣೇಶ್(18) ಆತ್ಮಹತ್ಯೆ ಮಾಡಿಕೊಂಡ ವಿಶೇಷಚೇತನ.
ಈತನಿಗೆ ಬಾಲ್ಯದಲ್ಲೇ ಮಾಸಾಶನ ಮಾಡಿಸಲಾಗಿದ್ದು, ತಂದೆ ಖಾತೆಗೆ ಹಣ ಜಮೆಯಾಗುತ್ತಿತ್ತು. 18 ವರ್ಷ ತುಂಬಿದ್ದ ಕಾರಣ ತನ್ನ ಖಾತೆಗೆ ವರ್ಗಾವಣೆ ಮಾಸಾಶನ ಹಣ ವರ್ಗಾವಣೆ ಮಾಡುವಂತೆ ಜಿಲ್ಲಾಧಿಕಾರಿ ರಾಕೇಶ್ಕುಮಾರ್ ಅವರಲ್ಲಿ ಧರಣೇಶ್ ಮನವಿ ಮಾಡಿದ್ದರು.
ಇದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಉಪತಹಶೀಲ್ದಾರ್ ಅವರ ಬಳಿ ಹೋಗಿ ನಿಮ್ಮ ದಾಖಲೆಗಳನ್ನು ಕೊಡಿ ಎಂದು ಸೂಚಿಸಿದ್ದರು.ಅದರಂತೆ ಕೋರಾದ ಉಪತಹಶೀಲ್ದಾರ್ ಪರಮೇಶ್ವರ್ ಅವರಿಗೆ ದಾಖಲೆಗಳನ್ನು ನೀಡಿ ತನ್ನ ಖಾತೆ ಮಾಸಾಶನ ಹಣ ಬರುವಂತೆ ಮಾಡಿ ಎಂದು ಕೋರಿದ್ದರು.
ಇದನ್ನು ಪರಿಶೀಲಿಸಿದ ಉಪತಹಶೀಲ್ದಾರ್ರವರು, ನಿನ್ನ ವಾರ್ಷಿಕ ವರಮಾನ 15 ಸಾವಿರ ರೂ.ಗಳಿದ್ದು, ಹಾಗಾಗಿ ಮಾಸಾಶನ ನೀಡಲು ಬರುವುದಿಲ್ಲ ಎಂದು ಸಬೂಬು ಹೇಳಿದ್ದಾರೆ.ನನ್ನ ಸಹೋದರಿಯೂ ಕೂಡ ವಿಕಲಚೇತನಳಾಗಿದ್ದು, ಅವರಿಗೆ ಬರುತ್ತಿದೆ, ನನಗೇಕೆ ಬರುವುದಿಲ್ಲ. ಇಬ್ಬರ ವಾರ್ಷಿಕ ವರಮಾನ ಒಂದೇ ಆಗಿದ್ದು, ನನ್ನದೇಕೆ 15 ಸಾವಿರವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಉಪತಹಶೀಲ್ದಾರ್ ಧರಣೇಶ್ನ ದಾಖಲೆಗಳನ್ನು ನೀಡಿ ವಾಪಸ್ ಕಳುಹಿಸಿದ್ದಾರೆ. ಇದರಿಂದ ಮನನೊಂದು ರಾತ್ರಿ ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಧರಣೇಶ್ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತಾದರೂ ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಇದಕ್ಕೂ ಮುನ್ನ ಧರಣೇಶ್ ತನ್ನ ಕಷ್ಟವನ್ನು ಗ್ರಾಮಸ್ಥರ ಬಳಿ ಹೇಳಿಕೊಂಡಿದ್ದು, ಇದನ್ನು ಕೆಲವರು ವಿಡಿಯೋ ಮಾಡಿದ್ದು, ಇದೀಗ ಆ ವಿಡಿಯೋ ವೈರಲ್ ಆಗಿದೆ.
ಈ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.