ಐವರು ಸರಗಳ್ಳರನ್ನು ಬಂಧಿಸಿದ ಪೊಲೀಸರು

ಚಿಕ್ಕಬಳ್ಳಾಪುರ, ಫೆ.12- ಜಾತ್ರೆ ಹಾಗೂ ವಿವಿಧ ರಥೋತ್ಸವಗಳಲ್ಲಿ ಕಡಲೇಕಾಯಿ ಪರಿಷೆ ಸಮಯವನ್ನೇ ಕಾದು ತಂಡದೊಂದಿಗೆ ತೆರಳಿ ಮಹಿಳೆಯರ ಸರ ಅಪಹರಿಸುತ್ತಿದ್ದ ಐದು ಮಂದಿಯನ್ನು ನಂದಿಗಿರಿ ಧಾಮ ಪೊಲೀಸರು ಬಂಧಿಸಿ 12.50 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಪೈಲ್ವಾನ್ ಕಾಲೋನಿಯ ವಾಸಿ ಕಾರು ಚಾಲಕ ಶ್ರೀಕಾಂತ್ (34) ಮತ್ತು ಆತನ ಪತ್ನಿಯರಾದ ಲಕ್ಷ್ಮಿ, ಗಾಯತ್ರಿ ಮತ್ತು ಸಹೋದರಿ ಶಿವಮ್ಮ, ಸ್ನೇಹಿತ ಭೋಜ ಬಂಧಿತ ಆರೋಪಿಗಳು.

ಆರೋಪಿಗಳು ಬೆಂಗಳೂರಿನ ವೀರಸಂದ್ರದಲ್ಲಿ ವಾಸಿಸುತ್ತಿದ್ದರು. ಇವರಿಂದ 410 ಗ್ರಾಂ ತೂಕದ ಚಿನ್ನದ ಆಭರಣಗಳು ಕೃತ್ಯಕ್ಕೆ ಬಳಸಿದ ಕಾರನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ.

ಜಾತ್ರೆ ವೇಳೆ ದೇವರ ದರ್ಶನಕ್ಕೆ ಸರದಿ ಸಾಲಿನಲ್ಲಿ ನಿಲ್ಲುವ ಮಹಿಳೆಯರನ್ನೇ ಗುರಿಯಾಗಿರಿಸಿಕೊಂಡು ಭಕ್ತರ ಸೋಗಿನಲ್ಲಿ ಈ ಕೃತ್ಯ ನಡೆಸುವುದನ್ನೇ ಕಾಯಕ ಮಾಡಿಕೊಂಡಿದ್ದ ಈ ತಂಡ ತಾಲ್ಲೂಕಿನ ನಂದಿ ಗ್ರಾಮದ ಶ್ರೀ ಭೋಗ ನಂದೀಶ್ವರ ಮತ್ತು ನಗರ ಹೊರಹೊಲಯದ ಚಿತ್ರಾವತಿ ಜಾತ್ರೆಗಳಲ್ಲಿ ಈ ಹಿಂದೆ ಈ ಕೃತ್ಯ ಎಸಗಿದ್ದರ ಬಗ್ಗೆ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.

ನಗರದ ಹೊರಹೊಲಯದ ವೀರಾಂಜನೇಯಸ್ವಾಮಿ ಸನ್ನಿಧಿಯಲ್ಲಿ ಡಿ.23 ರಂದು ನಡೆದ ಕಡಲೆಕಾಯಿಪರಿಷೆ ಮತ್ತು ವೀರಾಂಜನೇಯ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಕೆಲ ಮಹಿಳೆಯರ ಕೊರಳಿನಲ್ಲಿದ್ದ ಚಿನ್ನದ ಸರಗಳನ್ನು ಎಗರಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಐದು ಮಂದಿ ಸರಗಳ್ಳರನ್ನು ಬಂಧಿಸಿ ಆರೋಪಿಗಳಿಂದ 12.50 ಲಕ್ಷದ ಚಿನ್ನಾಭರಣ ಮತ್ತು ಇನ್ನೋವಾ ಕಾರು ವಶಪಡಿಸಿಕೊಂಡಿದ್ದಾರೆ.

ಅದೇ ರೀತಿ ಕಳೆದ ಡಿಸೆಂಬರ್ ಮಾಹೆಯಲ್ಲಿ ಈ ಭಾಗದಲ್ಲಿ ಅತ್ಯಂತ ವೈಭವವಾಗಿ ಆದಿಚುಂಚನಗಿರಿ ಮಹಾಸಂಸ್ಥಾನದ ಚಿಕ್ಕಬಳ್ಳಾಪುರ ಶಾಖಾಮಠದಿಂದ ನಡೆಯುವ ಕಳ್ಳೆಕಾಯಿ ಪರಿಷೆಯಲ್ಲಿ ಕಡಲೆಕಾಯಿಯನ್ನು ಭಕ್ತರು ಆರಿಸಿಕೊಳ್ಳುವ ಸಂದರ್ಭದಲ್ಲಿ ಈ ಐದೂ ಖದೀಮರು ತಮ್ಮ ಚಲಾಕಿತನದ ಕೈ ಚಳಕ ತೋರಿಸಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಸೊಪ್ಪಹಳ್ಳಿ ಗ್ರಾಮದ ಸರಸ್ವತಮ್ಮ ಅವರ 75 ಗ್ರಾಂ ಚಿನ್ನದ ಸರ, ಕಂದವಾರ ಮುನಿರತ್ನಮ್ಮ ಅವರ 36 ಗ್ರಾಂ ಮಾಂಗಲ್ಯ ಸರ, ಕೊಳವನಹಳ್ಳಿ ರತ್ನಮ್ಮ ಎಂಬುವರ 73 ಗ್ರಾಂ ತೂಕದ ಮಾಂಗಲ್ಯ ಸರವನ್ನು ಎಗಿರಿಸಿ ಪರಾರಿಯಾಗಿದ್ದರು.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕಾರ್ತಿಕ್‍ರೆಡ್ಡಿ ಉಪಾಧಿಕ್ಷಕ ಪ್ರಭುಶಂಕರ್ ಮಾರ್ಗದರ್ಶನದಲ್ಲಿ ಸಿಪಿಐ ಎಸ್.ವಿ. ಸುದರ್ಶನ್ ನಂದಿಗಿರಿಧಾಮ ಪೊಲೀಸ್‍ ಠಾಣೆಯ ಎಸ್‍ಐ ಓಂಪ್ರಕಾಶ್‍ಗೌಡ, ಎಎಸ್‍ಐ ನಾರಾಯಣಸ್ವಾಮಿ, ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ