ಆಡಿಯೋ ಪ್ರಕರಣವನ್ನು ಎಸ್‍ಐಟಿ ಮೂಲಕ ತನಿಖೆ ನಡೆಸಲು ಸರ್ಕಾರದ ನಿರ್ಧಾರ: ಯಡಿಯೂರಪ್ಪರವರಿಂದ ತಮ್ಮ ಆಪ್ತರ ಜೊತೆ ರಹಸ್ಯ ಸಭೆ

ಬೆಂಗಳೂರು, ಫೆ.12-ಆಪರೇಷನ್ ಕಮಲ ಆಡಿಯೋ ಪ್ರಕರಣವನ್ನು ರಾಜ್ಯಸರ್ಕಾರ ವಿಶೇಷ ತನಿಖಾ ದಳ (ಎಸ್‍ಐಟಿ)ದ ಮೂಲಕ ತನಿಖೆ ನಡೆಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕಾನೂನು ಕ್ರಮಗಳ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ತಮ್ಮ ಆಪ್ತರ ಜೊತೆ ರಹಸ್ಯ ಮಾತುಕತೆ ನಡೆಸಿದರು.

ನಗರದ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಗೋವಿಂದ ಕಾರಜೋಳ, ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ವೈ.ಎ.ನಾರಾಯಣಸ್ವಾಮಿ ಸೇರಿದಂತೆ ಮತ್ತಿತರ ಜೊತೆ ಸಮಾಲೋಚನೆ ನಡೆಸಿದರು.

ರಾಜ್ಯ ಸರ್ಕಾರ ಈ ಪ್ರಕರಣವನ್ನು ಎಸ್‍ಐಟಿಗೆ ವಹಿಸಿದರೆ ವಿಧಾನಮಂಡಲದ ಉಭಯ ಸದನಗಳಲ್ಲಿ ಹೋರಾಟ ನಡೆಸಿ ನ್ಯಾಯಾಂಗ ಇಲ್ಲವೆ, ಸದನ ಸಮಿತಿ ಮೂಲಕ ತನಿಖೆ ನಡೆಸಲು ವಿಧಾನಸಭೆ ಸ್ಪೀಕರ್‍ಗೆ ಒತ್ತಡ ಹಾಕಬೇಕೆಂಬ ಬಗ್ಗೆಯೂ ಚರ್ಚಿಸಲಾಗಿದೆ.

ಯಾವುದೇ ಕಾರಣಕ್ಕೂ ಈ ನಿರ್ಧಾರದಿಂದ ಹಿಂದೆ ಸರಿಯದೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು.ನಾವು ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲಿದ್ದೇವೆ. ಪ್ರಕರಣದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಆರೋಪಿಯಾಗಿರುವುದರಿಂದ ನ್ಯಾಯಾಂಗ ಇಲ್ಲವೆ ಸದನ ಸಮಿತಿ ಮೂಲಕವೇ ತನಿಖೆ ನಡೆಸಬೇಕೆಂಬ ನಿರ್ಧಾರಕ್ಕೆ ಬದ್ಧರಾಗಬೇಕೆಂಬ ಅಭಿಪ್ರಾಯವು ವ್ಯಕ್ತವಾಗಿದೆ.

ಕುಮಾರಸ್ವಾಮಿಯವರು ಆರೋಪಿ ಸ್ಥಾನದಲ್ಲಿರುವುದರಿಂದ ಎಸ್‍ಐಟಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ. ಎಸ್‍ಐಟಿ ಸಿಎಂ ಕೈಕೆಳಗೆ ಕಾರ್ಯನಿರ್ವಹಿಸುವುದರಿಂದ ಅವರ ನಿರ್ದೇಶನದಂತೆ ತನಿಖೆ ನಡೆಯುತ್ತದೆ.ಇದು ಕೇವಲ ವಿರೋಧ ಪಕ್ಷದವರನ್ನು ಗುರಿಯಾಗಿಸಿಕೊಂಡು ಆಡಳಿತ ಪಕ್ಷದವರನ್ನು ರಕ್ಷಣೆ ಮಾಡುವ ಹುನ್ನಾರವಾಗಿದೆ. ಹೀಗಾಗಿ ನ್ಯಾಯಾಂಗ ಇಲ್ಲವೆ ಸದನ ಸಮಿತಿಯಿಂದಲೇ ತನಿಖೆ ನಡೆಸಬೇಕು, ಸದನದಲ್ಲಿ ಎಲ್ಲಾ ಸದಸ್ಯರು ಒಗ್ಗಟ್ಟು ಪ್ರದರ್ಶಿಸುವಂತೆ ಬಿಎಸ್‍ವೈ ಸೂಚಿಸಿದ್ದಾರೆ.

ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಅವರನ್ನು ನಾನೇ ಕಳುಹಿಸಿದ್ದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.ಇದು ಪೂರ್ವನಿಯೋಜಿತ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.ನಾನು ಆರೋಪಿಯಾದರೆ, ಕುಮಾರಸ್ವಾಮಿ ಕೂಡ ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ.ಎಸ್‍ಐಟಿ ತನಗೆ ಬೇಕಾದಂತೆ ತನಿಖೆ ನಡೆಸುತ್ತದೆ. ಈ ಪ್ರಕರಣದಲ್ಲಿ ಆಡಳಿತ ಪಕ್ಷದ ಷಡ್ಯಂತ್ರ ಸ್ಪಷ್ಟವಾಗಿರುವುದರಿಂದ ಯಾವುದೇ ಕಾರಣಕ್ಕೂ ಎಸ್‍ಐಟಿ ತನಿಖೆಗೆ ಒಪ್ಪಬಾರದು ಎಂದು ಮುಖಂಡರು ಬಿಎಸ್‍ವೈಗೆ ಸಲಹೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದಲ್ಲದೆ, ವಿಜಾಪುರದ ಮುಖಂಡ ವಿಜಿ ಗೌಡ ಪಾಟೀಲ್‍ಗೆ ವಿಧಾನಪರಿಷತ್‍ಗೆ ನಾಮಕರಣ ಮಾಡಲು 25 ಕೋಟಿ ಹಣ ನೀಡಿರುವ ಸಿಡಿಯನ್ನು ತನಿಖೆಗೊಳಪಡಿಸಬೇಕು.ಉಭಯ ಸದನಗಳಲ್ಲಿ ಈ ಬಗ್ಗೆ ಹೋರಾಟ ನಡೆಸುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ