ಬೆಂಗಳೂರು,ಫೆ.12-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡುವ ಸಂದರ್ಭದಲ್ಲಿ ಉಂಟಾದ ಗದ್ದಲದಲ್ಲಿ ಮುಂದೂಡಿಕೆಯಾಗಿದ್ದ ಸದನ ಮತ್ತೆ ಸಮಾವೇಶಗೊಂಡಾಗ ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವರು, ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಮಾತನಾಡಲು ಅವಕಾಶ ನೀಡಿದರು.
ಮಾತು ಮುಂದುವರೆಸಿದ ಶಿವಲಿಂಗೇಗೌಡರು, ಮದುವೆ, ಸಭೆ, ಸಮಾರಂಭದಲ್ಲಿ ಜನರು ನಿಮ್ಮದು ಇನ್ನೂ ನಿಲ್ಲಲಿಲ್ಲವೇ ಎಂಬ ರೀತಿಯಲ್ಲಿ ಚರ್ಚೆ ಮಾಡುತ್ತಿದ್ದಾರೆ.ಅಷ್ಟೇ ಅಲ್ಲ, ಹೆಂಡತಿ, ಮಕ್ಕಳು ಕೂಡ ಸಂಶಯ ಪಡುವ ರೀತಿ ಇದೆ. ಬೆಂಗಳೂರಿಗೆ ಹೊರಟರೆ ಡೀಲ್ಗೀಲ್ ನಡೆದಿದೆಯೇ ಎಂದು ಪ್ರಶ್ನಿಸುತ್ತಾರೆ. ಗೌರವಯುತವಾಗಿ ವಿಧಾನಸಭೆಗೆ ಹೋಗಿ ಬನ್ನಿ ಎಂದು ಹೇಳುತ್ತಾರೆ. ಈ ವಿಚಾರದಲ್ಲಿ ಸತ್ಯವನ್ನೇ ಹೇಳುತ್ತಿರುವುದಾಗಿ ಹೇಳಿದಾಗ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ, ಮನೆಯಲ್ಲಿರುವವರ ವಿಷಯ ಪ್ರಸ್ತಾಪ ಮಾಡಬೇಡಿ ಎಂದರು.ಆಗ ಬಿಜೆಪಿ ಹಾಗೂ ಕಾಂಗ್ರೆಸ್ ಜೆಡಿಎಸ್ ಶಾಸಕರ ನಡುವೆ ಮಾತಿನ ಚಕಮಕಿ, ವಾಗ್ವಾದ ಉಂಟಾಗಿ ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು.
ಶಾಸಕ ರೇಣುಕಾಚಾರ್ಯ ಅವರು, ಈ ಬೆಳವಣಿಗೆಗೆ ಯಾರು ಕಾರಣ? ಚರ್ಚೆಯಾಗಬೇಕು.ವಿಷಯಾಂತರ ವಾಗುವುದು ಬೇಡ ಎಂದರು.
ಅಷ್ಟರಲ್ಲಿ ಎದ್ದು ನಿಂತ ಸಚಿವ ಪ್ರಿಯಾಂಕ್ ಖರ್ಗೆ, ಸಾರ್ವಜನಿಕವಾಗಿ ಶಾಸಕರ ವಿಶ್ವಾಸಾರ್ಹತೆ ಎಷ್ಟಿದೆ ಎಂಬ ಬಗ್ಗೆ ಮಾತನಾಡುತ್ತಿದ್ದಾರೆ. ವಿದ್ಯಾರ್ಥಿಗಳ್ಯಾರು ಕೂಡ ರಾಜಕಾರಣಿಗಳಾಗಲು ಬಯಸುತ್ತಿಲ್ಲ ಎಂದರು. ಆಗ ಬಸವರಾಜಬೊಮ್ಮಾಯಿ ಅವರು ಯಾರಿಗೂ ಬುದ್ದಿ ಹೇಳುವ ಅಗತ್ಯವಿಲ್ಲ. ನಮ್ಮ ನಮ್ಮ ನಡವಳಿಕೆಗಳನ್ನು ಸರಿಪಡಿಸಿಕೊಳ್ಳೋಣ.ಮೊದಲು ನೀವು ಸುಧಾರಿಸಿಕೊಳ್ಳಿ ಎಂದು ತಿರುಗೇಟು ನೀಡಿದರು.
ಈ ಹಂತದಲ್ಲಿ ಕೆಲ ಕಾಲ ಬಸವರಾಜಬೊಮ್ಮಾಯಿ ಹಾಗೂ ಪ್ರಿಯಾಂಕ್ ಖರ್ಗೆ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲ ಕಾಲ ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರ ನಡುವೆ ವಾಗ್ವಾದ ನಡೆಯಿತು.ಆಗ ಉಪಸಭಾಧ್ಯಕ್ಷರು ಮಧ್ಯಪ್ರವೇಶಿಸಿ ಉಭಯ ಶಾಸಕರನ್ನು ಸಮಾಧಾನಗೊಳಿಸಿ ಚರ್ಚೆ ಮುಂದುವರೆಸಲು ಶಿವಲಿಂಗೇಗೌಡರಿಗೆ ಅವಕಾಶ ಮಾಡಿಕೊಟ್ಟರು.