ಆಡಿಯೋ ಪ್ರಕರಣ ವಾದ ವಿವಾದ ಹಿನ್ನಲೆ ಕೆಲ ಕಾಲ ಕಲಾಪ ಸ್ಥಗಿತ

ಬೆಂಗಳೂರು, ಫೆ.12-ಆಪರೇಷನ್ ಕಮಲದ ಆಡಿಯೋ ಪ್ರಕರಣ ಇಂದು ಕೂಡ ವಿಧಾನಸಭೆಯಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿ ಕೋಲಾಹಲ ಸೃಷ್ಟಿಸಿದ್ದಲ್ಲದೆ, ಕಲಾಪವನ್ನು ಮುಂದೂಡಬೇಕಾದ ಸನ್ನಿವೇಶ ನಿರ್ಮಿಸಿತು.

ಒಟ್ಟಾರೆ ಇಂದಿನ ಅಧಿವೇಶನದಲ್ಲಿ ಬಿಜೆಪಿ ಆಡಿಯೋ ಪ್ರಕರಣವನ್ನು ಎಸ್‍ಐಟಿ ತನಿಖೆಯ ಬದಲಾಗಿ ಸದನ ಸಮಿತಿ, ಶಿಷ್ಟಾಚಾರ ಸಮಿತಿ ಅಥವಾ ನ್ಯಾಯಾಂಗ ಸಮಿತಿ ತನಿಖೆಗೆ ಒಪ್ಪಿಸುವಂತೆ ಪ್ರಸ್ತಾಪಿಸಿತ್ತು.ಬಿಜೆಪಿಯ ಜೆ.ಸಿ.ಮಾಧುಸ್ವಾಮಿ, ಸುರೇಶ್‍ಕುಮಾರ್, ಕೆ.ಜಿ.ಬೋಪಯ್ಯ ಅವರುಗಳು ಮಾತನಾಡಿ, ಸರ್ಕಾರದ ಮೇಲೆ ನಮಗೆ ವಿಶ್ವಾಸವಿಲ್ಲ. ಹಾಗಾಗಿ ಎಸ್‍ಐಟಿ ತನಿಖೆ ಬೇಡ.ಸದನದ ಅಧೀನದಲ್ಲೇ ಇರುವ ಸಮಿತಿಗಳಿಂದ ಪ್ರಕರಣದ ತನಿಖೆ ಮಾಡಿಸಿ ಎಂದು ಪಟ್ಟು ಹಿಡಿದರು.

ಇದಕ್ಕೆ ಆಡಳಿತ ಪಕ್ಷದ ಪರವಾಗಿ ಪ್ರತಿವಾದ ಮಾಡಿದ ಸಚಿವ ಆರ್.ವಿ.ದೇಶಪಾಂಡೆ, ಸಾಂವಿಧಾನಿಕ ಸಂಸ್ಥೆಗಳಿಗೆ ಈ ಸದನ ಹೆಚ್ಚಿನ ಬಲ ತುಂಬಬೇಕೇ ಹೊರತು ನಿಶ್ಶಕ್ತಿಕರಣಗೊಳಿಸಬಾರದು.ಸರ್ಕಾರ ಯಾವುದೇ ಇದ್ದರೂ ಆಡಳಿತಾತ್ಮಕ ವ್ಯವಸ್ಥೆ ಒಂದೇ.ಎಸ್‍ಐಟಿ ತನಿಖೆಯಿಂದ ಯಾವ ಲೋಪವೂ ಆಗುವುದಿಲ್ಲ. ಪಾರದರ್ಶಕ ತನಿಖೆ ನಡೆಯಲಿದೆ. ಮೇಲಾಗಿ ಎಸ್‍ಐಟಿ ತನಿಖೆಯ ವಿಷಯ ಪ್ರಸ್ತಾಪಿಸಿದ್ದು, ಸರ್ಕಾರ ಅಲ್ಲ. ಸ್ಪೀಕರ್ ನೀಡಿದ ಸಲಹೆ ಆಧರಿಸಿ ಮುಖ್ಯಮಂತ್ರಿ ಎಸ್‍ಐಟಿ ತನಿಖೆಯನ್ನು ಘೋಷಿಸಿದ್ದಾರೆ ಎಂದರು.

ಅದಕ್ಕೆ ಬಿಜೆಪಿಯವರು ಆಕ್ಷೇಪಿಸಿದಾಗ ಯಾವ ತನಿಖೆಯಾದರೂ ನಮಗೆ ಒಪ್ಪಿಗೆ ಇದೆ ಎಂದು ಮುಖ್ಯಮಂತ್ರಿ ಹೇಳಿಕೆ ನೀಡಿದರು. ಅವರಿಗೆ ಯಾವುದೇ ದ್ವೇಷ ರಾಜಕಾರಣ ಮಾಡುವ ಉದ್ದೇಶ ಇಲ್ಲ. ಅಂತಹ ಉದ್ದೇಶವಿದ್ದಿದ್ದರೆ ತನಿಖೆ ವಿಷಯದಲ್ಲಿ ಅವರು ಮುಕ್ತ ಮನಸ್ಸು ಹೊಂದಿರುತ್ತಿರಲಿಲ್ಲ ಎಂದು ಹೇಳಿದರು.
ಈ ನಡುವೆ ಮಾತನಾಡಿದ ಬಿಜೆಪಿ ಯ ಸುರೇಶ್‍ಕುಮಾರ್ ಅವರು, ಭಾನುವಾರ ನಮ್ಮ ಪಕ್ಷದ ಬಂಟ್ವಾಳ ಕ್ಷೇತ್ರದ ರಾಜೇಶ್ ಅವರು ವಿಮಾನದಲ್ಲಿ ಬರುವಾಗ ಆಡಳಿತ ಪಕ್ಷದ ವಿಧಾನಪರಿಷತ್ ಸದಸ್ಯರೊಬ್ಬರು ಪಕ್ಕದಲ್ಲೇ ಕುಳಿತಿದ್ದರು.ಆಡಿಯೋ ಪ್ರಕರಣದ ಬಗ್ಗೆ ಎಸ್‍ಐಟಿ ತನಿಖೆ ನಡೆಯಲಿದೆ ಎಂದು ಹೇಳಿದ್ದರಂತೆ ಎಂದುಹೇಳಿದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಸ್ಪೀಕರ್ ರಮೇಶ್‍ಕುಮಾರ್ ಅವರು, ಈ ರೀತಿಯ ಮಾತುಗಳಿಗೆ ಅರ್ಥ ಏನು?ಇಲ್ಲಿ ಎಸ್‍ಐಟಿ ತನಿಖೆ ಘೋಷಣೆಯಾಗುವುದು ಮೊದಲೇ ನಿರ್ಧಾರವಾಗಿತ್ತು ಎಂಬಂತಾಗುತ್ತದೆ. ಇದು 50 ಕೋಟಿ ಆರೋಪಕ್ಕಿಂತಲೂ ದುಬಾರಿಯಾದ ಆರೋಪ. ಸರ್ಕಾರದ ಮಾತು ಕೇಳುತ್ತೇನೆ ಎಂಬ ಅಪವಾದಕ್ಕೆ ಗುರಿಯಾಗಬೇಕಾಗುತ್ತದೆ. ನಿಮ್ಮ ಮಾತಿನ ಅರ್ಥವನ್ನು ಸ್ಪಷ್ಟವಾಗಿ ವಿವರಿಸಿ ಎಂದು ತಾಕೀತು ಮಾಡಿದರು.

ಆಡಳಿತ ಪಕ್ಷದ ಶಾಸಕರು ಸುರೇಶ್‍ಕುಮಾರ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದಾಗ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

ಬಿಜೆಪಿಯವರ ವಿರೋಧಕ್ಕೆ ಉತ್ತರ ನೀಡಲು ಎದ್ದು ನಿಂತಮುಖ್ಯಮಂತ್ರಿಯವರು ನಾನು ಯಾವುದೇ ದ್ವೇಷದ ರಾಜಕಾರಣ ಮಾಡುವುದಿಲ್ಲ. ತನಿಖೆ ವಿಷಯದಲ್ಲಿ ಮುಕ್ತ ಮನಸ್ಸು ಹೊಂದಿದ್ದೇನೆ ಎಂದರಲ್ಲದೆ, 2014ರಲ್ಲಿ ನಡೆದ ವಿಜೂಗೌಡ ಪ್ರಕರಣ, ನಿನ್ನೆಯ ಆಡಿಯೋ ಪ್ರಕರಣ ಎಲ್ಲದರ ಬಗ್ಗೆಯೂ ಸುದೀರ್ಘ ವಿವರಣೆ ನೀಡಲಾರಂಭಿಸಿದರು.ಆಗ ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಅವರು, ನಾವು ಸ್ಪೀಕರ್ ವಿರುದ್ಧ ಕೇಳಿ ಬಂದಿರುವ ಆರೋಪಿಗಳಿಗಷ್ಟೇ ಸೀಮಿತವಾಗಿ ಮಾತನಾಡಿದ್ದೇವೆ. ಮುಖ್ಯಮಂತ್ರಿಯವರು ಆ ವಿಷಯ ಹೊರತು ಪಡಿಸಿ ಉಳಿದೆಲ್ಲ ವಿಷಯಗಳನ್ನು ಪ್ರಸ್ತಾಪಿಸಿ ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಿ ತಲೆ ತೊಳೆದುಕೊಂಡು ಹೋಗುವುದಾದರೆ ನಾವು ಅದನ್ನುಒಪ್ಪುವುದಿಲ್ಲ. ನಾವೂ ಬೇರೆ ಬೇರೆ ವಿಷಯಗಳನ್ನು ಮಾತನಾಡಬೇಕಾಗುತ್ತದೆ ಎಂದು ಪ್ರತಿವಾದ ಮಾಡಿದರು.

ಮಧ್ಯಪ್ರವೇಶಿಸಿದ ರಮೇಶ್‍ಕುಮಾರ್ ಅವರು, ನಿಮ್ಮ ಶ್ರೀರಾಮುಲು ಆಗಲಿ ಅಥವಾ ಇತರ ಶಾಸಕರಾಗಲಿ ವಿಷಯದ ಚೌಕಟ್ಟಿನಲ್ಲಿ ಮಾತನಾಡಿಲ್ಲ.

ಸಿದ್ದರಾಮಯ್ಯನವರ ಹೆಸರನ್ನೂ ಎಳೆದು ತಂದಿದ್ದಾರೆ. ನಾನು ಅಸಂಸದೀಯ ಪದಗಳನ್ನು ಹೊರತುಪಡಿಸಿ ಉಳಿದ ಯಾವುದನ್ನೂ ನಿರ್ಬಂಧಿಸಿಲ್ಲ. ಎಲ್ಲವೂ ಮುಕ್ತ ಚರ್ಚೆಯಾಗಲಿ ಎಂದರು.

ಈ ಸಂದರ್ಭದಲ್ಲಿ ನಡೆದ ಮಾತಿನ ಚಕಮಕಿ ನಡುವೆ ಕುಮಾರಸ್ವಾಮಿಯವರು, ನನ್ನ ಸರ್ಕಾರದ ಬಗ್ಗೆ ಅನುಮಾನದ ಮಾತನಾಡುತ್ತಾರೆ. ನಮ್ಮ ಪಕ್ಷದ ಶಾಸಕರನ್ನು ಮುಂಬೈನಲ್ಲಿಟ್ಟು, ನಿನ್ನೆ ಅವರ ಪರಿಸ್ಥಿತಿ ಏನಾಗಿದೆ ಎಂದರೆ ಎಂದು ಆಪರೇಷನ್ ಕಮಲವನ್ನು ಪ್ರಸ್ತಾಪಿಸುತ್ತಿದ್ದಂತೆ ಬಿಜೆಪಿಯ ಎಲ್ಲಾ ಶಾಸಕರು ಎದ್ದು ಪ್ರತಿರೋಧ ವ್ಯಕ್ತಪಡಿಸಲಾರಂಭಿಸಿದರು.

ಆಡಳಿತ ಪಕ್ಷದ ಶಾಸಕರೂ ಕೂಡ ಇದಕ್ಕೆ ತಿರುಗೇಟು ನೀಡಲಾರಂಭಿಸಿದಾಗ ವಾದ-ವಿವಾದಗಳು ಆರಂಭವಾದವು.

ಎರಡೂ ಪಕ್ಷಗಳ ನಡುವೆ ಗದ್ದಲ ಜೋರಾದಾಗ ಸಭಾಧ್ಯಕ್ಷರು ಸದನವನ್ನು 15 ನಿಮಿಷ ಕಾಲ ಮುಂದೂಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ