ಡೆಹರಾಡೂನ್ : ರಸ್ತೆಯ ಮೇಲೆ ಓಡಾಡುವ ವಾಹನಗಳ ಬಾಗಿಲು ಅಚಾನಕ್ಕಾಗಿ ತೆಗೆದು ಹೋದರೆ ಅದನ್ನು ಕ್ಷಮಿಸಬಹುದು. ಆದರೆ, ಆಕಾಶದಲ್ಲಿ ಹಾರಾಡುವ ವಿಮಾನದ ಬಾಗಿಲು ಓಪನ್ ಆಗಿ ಬಿಟ್ಟರೆ? ಹೀಗೊಂದು ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ವಿಮಾನ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಉತ್ತರಾಖಂಡದ ಪಟ್ನಗರ್ನಿಂದ ಫಿಥೋರ್ಘಡಕ್ಕೆ ವಿಮಾನ ಹೊರಟಿತ್ತು. ಟೇಕ್ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನ ಅದೇ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿತ್ತು. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಾಪಾಸಾಗಿರುವುದಾಗಿ ವಿಮಾನ ಸಂಸ್ಥೆ ಸ್ಪಷ್ಟನೆಯನ್ನೂ ನೀಡಿತ್ತು. ಆದರೆ, ಪ್ರಯಾಣಿಕರು ಮಾತ್ರ ಇದನ್ನು ಒಪ್ಪಲು ಸಿದ್ಧರಿಲ್ಲ.
“ಹಾರಾಟ ನಡೆಸುವಾಗ ವಿಮಾನದ ಬಾಗಿಲು ಅಚಾನಕ್ಕಾಗಿ ತೆರೆದುಕೊಂಡಿದೆ. ಇದರಿಂದ ಒಮ್ಮೆ ಆತಂಕವಾಯಿತು. ಅಷ್ಟೇ ಅಲ್ಲ, ವಿಮಾನ ತನ್ನ ನಿಯಂತ್ರಣವನ್ನು ಕಳೆದುಕೊಳ್ಳುವುದರಲ್ಲಿತ್ತು. ಈ ಹಿನ್ನೆಲೆಯಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ಸಂಸ್ಥೆ ತಾನು ಮಾಡಿರುವ ತಪ್ಪನ್ನು ಮುಚ್ಚಿ ಹಾಕಲು ಈ ರೀತಿ ಹೇಳುತ್ತಿದೆ,” ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
“ವಿಮಾನ ಟೇಕ್ಆಫ್ ಆದ ಏಳೇ ನಿಮಿಷಗಳಲ್ಲಿ ವಿಮಾನದ ಬಾಗಿಲು ಗಾಳಿಗೆ ತೆರೆದುಕೊಂಡಿತ್ತು. ನಾನು ಬಾಗಿಲ ಸಮೀಪವೇ ಕುಳಿತಿದ್ದರಿಂದ ತೀವ್ರ ಭಯಗೊಂಡಿದ್ದೆ. ಹಾರಾಟ ಆರಂಭಿಸುವುದಕ್ಕೂ ಮೊದಲು ಸಿಬ್ಬಂದಿ ಬಾಗಿಲನ್ನೊಮ್ಮೆ ಪರೀಕ್ಷಿಸಿದ್ದರು,” ಎಂದು ಲೋಕೇಶ್ ಬೋರಾ ಹೆಸರಿನ ಪ್ರಯಾಣಿಕ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಡಾನ್ ಯೋಜನೆ ಅಡಿಯಲ್ಲಿ ಪಟ್ನಗರ್-ಫಿಥೋರ್ಘರ್ ನಡುವೆ ವಿಮಾನ ಹಾರಟ ಆರಂಭಿಸಲಾಗಿತ್ತು. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಕಳೆದ ಒಂದು ತಿಂಗಳಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ 6 ಬಾರಿ ವಿಮಾನ ಹಾರಾಟ ರದ್ದು ಮಾಡಲಾಗಿತ್ತು.