ಬೆಂಗಳೂರು, ಫೆ.11-ಕಾಂಗ್ರೆಸ್ನ ವಿಪ್ನ್ನು ಉಲ್ಲಂಘಿಸಿ ಸೆಡ್ಡು ಹೊಡೆದಿದ್ದ ನಾಲ್ಕು ಮಂದಿ ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸ್ಪೀಕರ್ ರಮೇಶ್ಕುಮಾರ್ ಅವರಿಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ.
ಇಂದು ಬೆಳಗ್ಗೆ ಸ್ಪೀಕರ್ ರಮೇಶ್ಕುಮಾರ್ ಅವರನ್ನು ಭೇಟಿ ಮಾಡಿ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿದ್ದಾರೆ.
ಅತೃಪ್ತ ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಸೂಕ್ತ ಸಾಕ್ಷ್ಯ, ಪುರಾವೆಗಳೊಂದಿಗೆ ದೂರು ಸಲ್ಲಿಸಲ್ಲಿದ್ದಾರೆ.ಶಾಸಕರಾದ ಗೋಕಾಕ್ ಕ್ಷೇತ್ರದ ರಮೇಶ್ ಜಾರಕಿ ಹೊಳಿ, ಅಥಣಿ ಕ್ಷೇತ್ರದ ಮಹೇಶ್ ಕುಮಟಳ್ಳಿ, ಚಿಂಚೋಳಿ ಕ್ಷೇತ್ರದ ಉಮೇಶ್ ಜಾಧವ್, ಬಳ್ಳಾರಿ ಕ್ಷೇತ್ರದ ನಾಗೇಂದ್ರ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಷೆಡ್ಯೂಲ್ 10ರಡಿ ಕ್ರಮ ಕೈಗೊಂಡು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಮನವಿ ಮಾಡಲಿದ್ದಾರೆ.
ಈ ನಾಲ್ವರು ಶಾಸಕರು 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದು ಸ್ಪರ್ಧಿಸಿದ್ದು, ಮತದಾರರು ಕಾಂಗ್ರೆಸ್ ಕಾರ್ಯಕ್ರಮ ಮತ್ತು ಸಿದ್ಧಾಂತಗಳನ್ನು ಬೆಂಬಲಿಸಿ ಮತ ಹಾಕಿದ್ದರು.ಅವರಲ್ಲಿ ರಮೇಶ್ ಜಾರಕಿಹೊಳಿ ಅವರು ಕೆಲ ಕಾಲ ಸಚಿವರಾಗಿಯೂ ಕೆಲಸ ಮಾಡಿದ್ದರು.ಇತ್ತೀಚಿನ ದಿನಗಳಲ್ಲಿ ಇವರು ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಾರೆ.ಜನ ಮತ ಹಾಕಿದ ಆಶಯಕ್ಕೆ ವಿರುದ್ಧವಾಗಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಪಕ್ಷದ ನಾಯಕತ್ವಕ್ಕೆ ಗೌರವ ನೀಡುತ್ತಿಲ್ಲ. ಮೂರು ಬಾರಿ ವಿಪ್ ನೀಡಿದರೂ ಅದನ್ನು ಉಲ್ಲಂಘಿಸಲಾಗಿದೆ. ಶಾಸಕಾಂಗ ಸಭೆಗೆ ಹಾಜರಾಗುವಂತೆ ಎರಡು ಬಾರಿ ವಿಪ್ ನೀಡಿದ್ದರೂ ಅದನ್ನು ಪಾಲಿಸಿಲ್ಲ. ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ವಿಪ್ ನೀಡಲಾಗಿತ್ತು ಅದನ್ನೂ ಉಲ್ಲಂಘಿಸಿದ್ದಾರೆ. ಶಾಸಕಾಂಗ ಸಭೆಗೆ ಗೈರು ಹಾಜರಾಗಿರುವ ಕುರಿತಂತೆ ಅವರು ನೀಡಿರುವ ಸಮರ್ಥನೆ ತೃಪ್ತಿದಾಯಕವಾಗಿಲ್ಲ. ಈವರೆಗೂ ವಿಧಾನಸಭೆ ಅಧಿವೇಶನಕ್ಕೂಹಾಜರಾಗದೆ, ತಮ್ಮ ಸ್ವಕ್ಷೇತ್ರಗಳಲ್ಲೂ ಇರದೆ ನಾಪತ್ತೆಯಾಗಿದ್ದಾರೆ. ಜವಾಬ್ದಾರಿಯುತ ಜನಪ್ರತಿನಿಧಿಗಳಾಗಿ ಕರ್ತವ್ಯ ನಿರ್ವಹಿಸಲು ಈ ನಾಲ್ವರು ವಿಫಲರಾಗಿರುವುದರಿಂದ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಸಿದ್ದರಾಮಯ್ಯ ದೂರು ನೀಡಲಿದ್ದಾರೆ.
ಜ.18ರಂದು ಕರೆದಿದ್ದ ಶಾಸಕಾಂಗ ಸಭೆಗೆ ವಿಪ್ ನೀಡಲಾಗಿತ್ತು. ಅದನ್ನು ನಾಲ್ವರು ಉಲ್ಲಂಘಿಸಿದ್ದರು. ಬೆಳಗಾವಿಯ ಪಿಎಲ್ಡಿ ಬ್ಯಾಂಕ್ ಚುನಾವಣೆಯಿಂದ ಆರಂಭಗೊಂಡ ರಮೇಶ್ ಜಾರಕಿಹೊಳಿ ಅವರ ಮುನಿಸು ನಿರಂತರವಾಗಿ ಮುಂದುವರೆದಿತ್ತು. ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಬಹಿರಂಗ ಹೇಳಿಕೆ ನೀಡುವ ಮೂಲಕ ಪ್ರತ್ಯೇಕ ಗುಂಪುಗಾರಿಕೆಗೆ ರಮೇಶ್ ಜಾರಕಿ ಹೊಳಿಚಾಲನೆ ನೀಡಿದ್ದರು.
ಸಚಿವ ಸಂಪುಟ ಸಭೆಗೆ ಹಾಜರಾಗದೇ ಇರುವ ಕಾರಣದಿಂದ ಸಂಪುಟ ಪುನಾರಚನೆ ವೇಳೆ ಅವರನ್ನು ಕೈಬಿಡಲಾಗಿತ್ತು. ಆನಂತರ ಮತ್ತಷ್ಟು ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಈ ನಾಲ್ವರು ಶಾಸಕರು ಮುಂಬೈನ ರೆಸಾರ್ಟ್ಗೆ ತೆರಳಿದ್ದರು ಎನ್ನಲಾಗಿದೆ.
ಸುಮಾರು ಒಂದು ತಿಂಗಳಿನಿಂದಲೂ ಮುಂಬೈನಲ್ಲೇ ಉಳಿದುಕೊಂಡಿದ್ದ ಶಾಸಕರು ಕಾಂಗ್ರೆಸ್ ನಾಯಕರ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮನವೊಲಿಕೆಗೆ ಬೆಲೆ ನೀಡಿಲ್ಲ. ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಎಚ್ಚರಿಕೆ ನೀಡಿದ ಹೊರತಾಗಿಯೂ ಅವರು ತಲೆಕೆಡಿಸಿಕೊಳ್ಳದೆ ಇರುವುದು ಕಾಂಗ್ರೆಸ್ ನಾಯಕರನ್ನು ರೊಚ್ಚಿಗೆಬ್ಬಿಸಿದೆ.
ಈ ನಡುವೆ ನಾಲ್ವರು ಶಾಸಕರು ಇಂದು ಬೆಂಗಳೂರಿಗೆ ಆಗಮಿಸಿ ಸ್ಪೀಕರ್ ಅವರನ್ನು ಭೇಟಿಮಾಡಿ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗಳಿವೆ. ಅದಕ್ಕೂ ಮುನ್ನ ಶಾಸಕರ ಸ್ಥಾನದಿಂದ ಅನರ್ಹಗೊಳಿಸುವಂತೆ ದೂರುನೀಡಿ ನಾಲ್ಕು ಮಂದಿಯನ್ನು ಕಾನೂನಿನ ಇಕ್ಕಟ್ಟಿನಲ್ಲಿ ಸಿಲುಕಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷ ದೂರು ನೀಡಿದ ನಂತರ ನಾಲ್ವರು ಶಾಸಕರ ರಾಜೀನಾಮೆ ನೀಡಿದರೂ ಅದು ಅಂಗೀಕಾರಗೊಳ್ಳುವ ಸಾಧ್ಯತೆ ಕಡಿಮೆ ಇದೆ.ಹೀಗಾಗಿ ಮೊನ್ನೆ ನಡೆದ ಶಾಸಕಾಂಗ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡಿದ್ದರೂ ಸಿದ್ದರಾಮಯ್ಯ ಎರಡು ದಿನ ಕಾದು ನೋಡುವ ನಿರ್ಧಾರ ಮಾಡಿದ್ದರು.ಆದರೂ ಈವರೆಗೆ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸದೆ ಇರುವುದರಿಂದ ನಾಲ್ವರು ಶಾಸಕರ ರಾಜಕೀಯ ಭವಿಷ್ಯಕ್ಕೆ ಗಂಡಾಂತರ ತರುವ ಬ್ರಹ್ಮಾಸ್ತ್ರವನ್ನು ಅಂತಿಮವಾಗಿ ಪ್ರಯೋಗಿಸಲಾಗಿದೆ.