ಬೆಂಗಳೂರು, ಫೆ.11-ಶಾಸಕರೊಬ್ಬರಿಗೆ ಹಣದ ಆಮಿಷ ಒಡ್ಡಿದ ಆಡಿಯೋ ಪ್ರಕರಣದ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಸಭಾನಾಯಕಿ ಜಯಮಾಲಾ ವಿಧಾನಪರಿಷತ್ನಲ್ಲಿಂದು ಸಭಾಪತಿಗೆ ಮನವಿ ಮಾಡಿದರು.
ಇದು ಅತ್ಯಂತ ಗಂಭೀರವಾದ ಘಟನೆ. ಶಾಸಕರನ್ನು ಹಣ ಕೊಟ್ಟು ಖರೀದಿ ಮಾಡುತ್ತಾರೆಂದರೆ ನಮ್ಮನ್ನು ಜನ ಯಾವ ರೀತಿ ನೋಡಬಹುದು. ದಾರಿಯಲ್ಲಿ ಹೋಗುವವರು ಈ ಬಗ್ಗೆ ಮಾತನಾಡಿದರೆ ತಲೆ ಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಒಪ್ಪಿಕೊಂಡಿದ್ದಾರೆ. ವಿಚಾರಣೆ ನಡೆದರೆ ಸತ್ಯಾಸತ್ಯತೆ ಹೊರಬರಲಿದೆ ಎಂದು ಹೇಳಿದರು.
ಜನರು ಇಂದು ರಾಜಕಾರಣಿಗಳನ್ನು ಅನುಮಾನದಿಂದ ನೋಡುವಂತಾಗಿದೆ. ಪ್ರತಿಯೊಬ್ಬರನ್ನೂ ಸಂಶಯದಿಂದ ನೋಡುತ್ತಾರೆ.ನಾವು ಎಷ್ಟಕ್ಕೆ ಖರೀದಿಯಾಗಿದ್ದೀವಿ ಎಂದು ಕೇಳುವ ಹಂತಕ್ಕೆ ಬಂದಿದೆ. ಕರ್ನಾಟಕ ವಿಧಾನ ಮಂಡಲಕ್ಕೆ ತನ್ನದೇ ಆದ ಘನತೆ -ಗೌರವವಿದೆ.ಇಂತಹ ಘಟನೆಗಳು ನಡೆದರೆ ನಾವು ಜನರಿಗೆ ಏನು ಉತ್ತರ ಕೊಡಬೇಕೆಂದು ಪ್ರಶ್ನಿಸಿದರು.
ಇದು ಯಾರೋ ಒಂದಿಬ್ಬರ ಪ್ರಶ್ನೆಯಲ್ಲ. ಪೀಠದ ಪ್ರಶ್ನೆ. ನಾವು ಸ್ಪೀಕರ್ ಅವರನ್ನೇ ಬುಕ್ ಮಾಡಿಕೊಂಡಿದ್ದೇವೆಂದು ಹೇಳಿದ್ದಾರೆಂದರೆ, ನಮ್ಮ ವ್ಯವಸ್ಥೆ ಎಲ್ಲಿಗೆ ಬಂದಿರಬಹುದು. ತಪ್ಪು ಯಾರೇ ಮಾಡಿದರೂ ತಪ್ಪೇ. ಸತ್ಯಾಸತ್ಯತೆ ಹೊರ ಬರಬೇಕು.ಈ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.
ಜೆಡಿಎಸ್ನ ಶ್ರೀಕಂಠೇಗೌಡ ಮಾತನಾಡಿ, ಕೆಳ ಮನೆಯಲ್ಲಿ ಚರ್ಚೆಗೆ ಅವಕಾಶ ನೀಡಿದ್ದಾರೆ. ಇಲ್ಲಿಯೂ ಕೂಡ ತಾವು ಚರ್ಚೆಗೆ ಅವಕಾಶ ಕಲ್ಪಿಸಬೇಕು.ಇಂದು ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸಂದರ್ಭ ಬಂದಿದೆ.3 ದಿನಗಳ ಹಿಂದೆ ನಡೆದಿರುವ ಘಟನೆ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ.ಶಾಸಕರನ್ನು ಖರೀದಿಸಲು ಸ್ಪೀಕರ್ರನ್ನೇ ಖರೀದಿಸಿದ್ದೇವೆ ಎಂದು ಹೇಳುವ ಮಟ್ಟಕ್ಕೆ ಬಂದಿದ್ದಾರೆ ಎಂದರೆ ಎಂತಹ ದುರದೃಷ್ಟಕರ. ಹಾಗಾಗಿ ಚರ್ಚೆಗೆ ನೋಟಿಸ್ ನೀಡದೆಯೇ ಚರ್ಚೆಗೆ ಅವಕಾಶ ಕಲ್ಪಿಸಿ ಕೊಡಿ ಎಂದರು.
ಕಾಂಗ್ರೆಸ್ನ ಸಿ.ಎಂ.ಇಬ್ರಾಹಿಂ ಮಾತನಾಡಿ, ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳು, ಪ್ರಧಾನಮಂತ್ರಿಯವರ ಹೆಸರನ್ನು ಎಳೆದು ತರಲಾಗಿದೆ.ಜನಪ್ರತಿನಿಧಿಗಳು ಇಂದು ಸಾರ್ವಜನಿಕರು ಬಸ್ಸ್ಟ್ಯಾಂಡ್ ಬಸವಿಯರಂತೆ ನೋಡುತ್ತಾರೆ. ನೀನು ಹತ್ತು ಕೋಟಿಗೋ, 20 ಕೋಟಿಗೋ ಎಂದು ಕೇಳುತ್ತಿದ್ದಾರೆ.ನಮಗೆ ತಲೆ ತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ತನಿಖೆ ನಡೆಯಬೇಕು. ಈ ಬಗ್ಗೆ ಸದಸ್ಯರು ತಮ್ಮ ಅಭಿಪ್ರಾಯ ಹೇಳಲು ಅವಕಾಶ ನೀಡಿ ಎಂದು ಮನವಿ ಮಾಡಿದರು.
ಜೆಡಿಎಸ್ನ ಬಸವರಾಜ್ ಹೊರಟ್ಟಿ ಮಾತನಾಡಿ, ಇದು ಅತ್ಯಂತ ಗಂಭೀರ ಪ್ರಕರಣ.ಎಲ್ಲಿ ನೋಡಿದರೂ ಜನರು ಇದರ ಬಗ್ಗೆಯೇ ಮಾತನಾಡುತ್ತಿದ್ದಾರೆ. ನಿನ್ನೆ ಹುಬ್ಬಳ್ಳಿಯಿಂದ ಬರುವಾಗ ರೈಲ್ವೆ ನಿಲ್ದಾಣದಲ್ಲಿ ನಾನು, ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್ ಸೇರಿದಂತೆ ಅನೇಕರು ನಿಂತಿದ್ದೆವು. ಜನ ನಮ್ಮನ್ನು ನೀವು ಎಷ್ಟಕ್ಕೆ ಸೇಲ್ ಆಗಿದ್ದೀರಿ ಎಂದು ಕೇಳುತ್ತಾರೆ…. ಇದರಿಂದ ನಮಗೆ ತಲೆ ಎತ್ತಿ ತಿರುಗಾಡದಂತಾಗಿದೆ.ಸದನದ ಸದಸ್ಯರೆಲ್ಲರೂ ಮುಕ್ತವಾಗಿ ಚರ್ಚೆ ನಡೆಸಲು ಅವಕಾಶ ಕೊಡಿ ಎಂದರು.
ಆಡಳಿತ ಪಕ್ಷದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ ಪ್ರತಿಪಕ್ಷದ ಸದಸ್ಯರು ಸಭಾತ್ಯಾಗ ನಡೆಸಿದ ಪ್ರಸಂಗ ನಡೆಯಿತು.