ಆಡಿಯೋ ಬಿಡುಗಡೆ ವಿಚಾರ ಮೇಲ್ಮನೆಯಲ್ಲಿ ಎರಡು ಭಾರಿ ಕಲಾಪ ಮುಂದೂಡಿಕೆ

ಬೆಂಗಳೂರು, ಫೆ.11-ಆಪರೇಷನ್ ಕಮಲ ಆಡಿಯೋ ಬಿಡುಗಡೆ ವಿಚಾರ ಮೇಲ್ಮನೆಯಲ್ಲಿ ಮಾರ್ದನಿಸಿ ಚರ್ಚೆಗೆ ಆಡಳಿತ ಪಕ್ಷದ ಸದಸ್ಯರೇ ಪಟ್ಟು ಹಿಡಿದು ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ ಉಂಟಾದ ಗದ್ದಲ, ಕೋಲಾಹಲದ ಪರಿಣಾಮ 2 ಬಾರಿ ಕಲಾಪವನ್ನು ಮುಂದೂಡಿದ ಪ್ರಸಂಗ ಜರುಗಿತು.

ಆಡಿಯೋ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಆಡಳಿತ ಪಕ್ಷ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಆಗ್ರಹಿಸಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಬಾವಿಗಿಳಿದು ಪ್ರತಿಭಟನೆ ನಡೆಸಿದರು.ಪ್ರತಿಪಕ್ಷಗಳ ಸದಸ್ಯರೊಂದಿಗೆ ವಾಗ್ದಾಳಿಗೆ ಮುಂದಾದರು.

ಸಭಾಪತಿ ಕೆ.ಪ್ರತಾಪ್‍ಚಂದ್ರ ಶೆಟ್ಟಿ ಅವರು ಎರಡು ಬಾರಿ ಕಲಾಪ ಮುಂದೂಡಿದರು.

ಜೆಡಿಎಸ್ ಶಾಸಕ ನಾಗನಗೌಡ ಕುಂದಕೂರು ಅವರನ್ನು ಸೆಳೆಯಲು ಅವರ ಪುತ್ರನ ಮೂಲಕ ಆಮಿಷವೊಡ್ಡಿರುವ ಆಡಿಯೋವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದ್ದು, ಅದರಲ್ಲಿ ಸ್ಪೀಕರ್, ಪ್ರಧಾನಮಂತ್ರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ, ನ್ಯಾಯಾಧೀಶರುಗಳ ವಿಷಯ ಪ್ರಸ್ತಾಪವಾಗಿದೆ.ಇದು ರಾಜ್ಯದ ಮಾನ-ಮರ್ಯಾದೆ ಪ್ರಶ್ನೆಯಾಗಿದೆ. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಕಲಾಪ ಆರಂಭದಲ್ಲಿಯೇ ಆಡಳಿತ ಪಕ್ಷದ ಸದಸ್ಯರಾದ ಐವಾನ್ ಡಿಸೋಜಾ, ಧರ್ಮಸೇನಾ ಸೇರಿದಂತೆ ಹಲವರು ಒತ್ತಾಯಿಸಿದರು.

ಸದನವನ್ನು ಹರಾಜಿಗಿಡಲಾಗಿದೆ.ಶಾಸಕರನ್ನು ಖರೀದಿ ಮಾಡುವ ಪ್ರಯತ್ನವನ್ನು ಮಾಡಲಾಗಿದೆ.ಈ ಬಗ್ಗೆ ನಾವು ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕು.ಇಲ್ಲದಿದ್ದರೆ ನಮ್ಮ ಗೌರವಕ್ಕೆ ಧಕ್ಕೆ ಬರುತ್ತದೆ ಎಂದು ಹಲವು ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರತಿಪಕ್ಷ ಬಿಜೆಪಿ ಸದಸ್ಯರು ನೀವೇನೂ ಸಾಚಾಗಳಾ…? ಹರಿಶ್ಚಂದ್ರರಾ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆಯಿತು.ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ಉಂಟಾಯಿತು. ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ಅವರು, ಆಡಳಿತ ಪಕ್ಷದ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ಮಾಡಿಕೊಡಿ. ಈ ರೀತಿ ಏಕಾಏಕಿ ಚರ್ಚೆಗೆ ಅವಕಾಶ ಮಾಡಿಕೊಡಲು ಬರುವುದಿಲ್ಲ. ನೀವೇನು ನೋಟೀಸ್ ನೀಡಿಲ್ಲ ಎಂದು ರೇಗಿದರು.

ಸಭಾಪತಿಗಳ ಈ ಕ್ರಮವನ್ನು ವಿಪಕ್ಷದ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು.ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ಮುಂದುವರೆಯಿತು. ಸಭಾಪತಿಗಳು ಐದು ನಿಮಿಷ ಕಲಾಪ ಮುಂದೂಡಿದರು.ಮತ್ತೆ ಕಲಾಪ ಆರಂಭವಾದಾಗ ಆಡಳಿತ ಪಕ್ಷದ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಆಡಿಯೋ ಬಗ್ಗೆ ಚರ್ಚೆ ನಡೆಸಲು ಪಟ್ಟು ಹಿಡಿದರು.

10 ಕೋಟಿ, 50 ಕೋಟಿ ರೂ.ಗಳ ವ್ಯವಹಾರದ ಬಗ್ಗೆ ಮಾತನಾಡಿದ್ದಾರೆ.ಇಷ್ಟೆಲ್ಲ ಹಣ ಎಲ್ಲಿಂದ ಬರುತ್ತದೆ.ಪ್ರಧಾನಿಯವರು ಕಪ್ಪು ಹಣ ನಿಯಂತ್ರಿಸುವ ಮಾತನಾಡುತ್ತಾರೆ. ಆದರೆ ಬಿಜೆಪಿಯವರ ಬಳಿ ಇಷ್ಟು ಪ್ರಮಾಣದ ಹಣ ಎಲ್ಲಿಂದ ಬರುತ್ತದೆ?ಒಬ್ಬೊಬ್ಬರಿಗೆ 25 ಕೋಟಿ ಹಣ ನೀಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.ಈ ಸದನಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದೆ. ಸದನದ ಗೌರವವೂ ಹಾಳಾಗುತ್ತಿದೆ.ಚರ್ಚೆ ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

ಸದನದ ನಿಯಮಾವಳಿಗಳಂತೆ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳೋಣ ಎಂದು ಸಭಾಪತಿಗಳು ಮನವಿ ಮಾಡಿದರಾದರೂ ಆಡಳಿತ ಪಕ್ಷದ ಸದಸ್ಯರು ಚರ್ಚೆಗೆ ಪಟ್ಟು ಹಿಡಿದು ಸದನದ ಬಾವಿಗಿಳಿದು ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತಾ ಪ್ರತಿಭಟನೆಗೆ ಮುಂದಾದರು.

ಆಗ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸಪೂಜಾರಿ ಸೇರಿದಂತೆ ಹಲವರು ಆಡಳಿತ ಪಕ್ಷದ ಸದಸ್ಯರ ಧೋರಣೆ ಖಂಡಿಸಿ, ಈ ಸರ್ಕಾರವೇ ಸತ್ತು ಹೋಗಿದೆ.ಆಡಳಿತ ಪಕ್ಷದವರೇ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿರುವುದು ದುರ್ದೈವದ ಸಂಗತಿ ಎಂದರು.

ಪ್ರತಿಪಕ್ಷಗಳ ಸದಸ್ಯರು ಕೂಡ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಪರಸ್ಪರ ವಾಗ್ದಾಳಿ ಮುಂದುವರೆಯಿತು.ಮತ್ತೆ ಸಭಾಪತಿಯವರು ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ