ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಸರ್ವ ಪಕ್ಷಗಳು ಯುದ್ದಕ್ಕೆ ಸನ್ನದ್ಧವಾಗಿವೆ. ಕೇಂದ್ರದ ಗದ್ದುಗೆ ಹಿಡಿಯಲು ಕೀಲಕ ಪಾತ್ರವಹಿಸುವ ಉತ್ತರಪ್ರದೇಶದ ಮೇಲೆ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಸ್ಪಿ-ಬಿಎಸ್ಪಿ ಪಕ್ಷದ ಕಣ್ಣು ನೆಟ್ಟಿದೆ. ಈಗಾಗಲೇ ಮಾಜಿ ಸಿಎಂ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷ ಜಂಟಿಯಾಗಿ ಚುನಾವಣೆ ಎದುರಿಸುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ದುಂಗುಬಡಿಸಿದಂತಾಗಿದೆ. ಈ ಮಧ್ಯೆ ಗಾಂಧಿ ಕುಟುಂಬದಿಂದ ಮತ್ತೊಂದು ಕುಡಿ ಪ್ರಿಯಾಂಕ ಗಾಂಧಿ ರಾಜಕೀಯ ಪ್ರವೇಶ ಮಾಡಿದ್ದು, ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ (ಉತ್ತರಪ್ರದೇಶ ಪೂರ್ವ) ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಇದು ಇತರೆ ಪಕ್ಷಗಳಿಗೆ ನಿದ್ದೆಗೆಡಿಸಿದೆ.
ಕಾಂಗ್ರೆಸ್ ಅನ್ನು ಎಸ್ಪಿ-ಬಿಎಸ್ಪಿ ಮೈತ್ರಿಯಿಂದ ಹೊರಗಿಡಲಾಗಿದೆ. ಹೀಗಾಗಿಯೇ ಕಾಂಗ್ರೆಸ್ ಉತ್ತರಪ್ರದೇಶದ ಎಲ್ಲಾ ಕ್ಷೇತ್ರದಲ್ಲೂ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಅಲ್ಲದೇ ಇಲ್ಲಿನ ಸ್ಥಳೀಯ ಕಾಂಗ್ರೆಸ್ ಘಟಕ ಇಂದಿನಿಂದಲೇ ಸಾಲುಸಾಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪ್ರಿಯಾಂಕ ಗಾಂಧಿ ನಾಲ್ಕು ದಿನ ಪ್ರವಾಸ ಕೈಗೊಂಡಿದ್ದಾರೆ. ಸಕ್ರಿಯ ರಾಜಕೀಯದ ಇನ್ನಿಂಗ್ಸ್ ಶುರು ಮಾಡಿದ ಬಳಿಕ ಉತ್ತರಪ್ರದೇಶಕ್ಕೆ ಪ್ರಿಯಾಂಕರದ್ದು ಮೊದಲ ಭೇಟಿ ಎನ್ನಲಾಗಿದೆ.
ಇನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸಂಸದ ಜ್ಯೋತಿರಾದಿತ್ಯ ಸಿಂದ್ಯಾ ಅವರು ಪ್ರಿಯಾಂಕ ಗಾಂಧಿಯವರಿಗೆ ಕ್ಯಾಂಪೇನ್ ವೇಳೆ ಜೊತೆಗೂಡಲಿದ್ದಾರೆ. ಈಗಾಗಲೇ ಇದರ ಬಗ್ಗೆ ಪ್ರಿಯಾಂಕ ಗಾಂಧಿಯವರ ಒಂದು ಆಡಿಯೋ ಬಿಡುಗಡೆಯಾಗಿದ್ದು, ಭಾರೀ ವೈರಲ್ ಆಗಿದೆ.‘ಹಲೋ, ದಿಸ್ ಈಸ್ ಪ್ರಿಯಾಂಕ ಗಾಂಧೀ ಸ್ಪೀಕಿಂಗ್’ ಎಂಬ ಆಡಿಯೋ ತುಣುಕು ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಅಪಾರ ಪ್ರಮಾಣದಲ್ಲಿ ಶೇರ್ ಆಗಿದೆಯಂತೇ!
ಎರಡು ವಾರದ ಹಿಂದೆಯೇ ಪ್ರಿಯಾಂಕಾ ಗಾಂಧಿ ಅಧಿಕೃತವಾಗಿ ರಾಜಕೀಯ ಅಖಾಡಾಕ್ಕೆ ಇಳಿದರು. ಪ್ರಿಯಾಂಕಾ ಗಾಂಧಿಯವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಇದೇ ಮೊದಲ ಬಾರಿ ಜವಾಬ್ದಾರಿ ನೀಡಲಾಗಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಉತ್ತರ ಪ್ರದೇಶದ ಕೆಲವು ಕ್ಷೇತ್ರಗಳ ಜವಾಬ್ದಾರಿಯನ್ನು ಪ್ರಿಯಾಂಕಾ ಅವರಿಗೆ ವಹಿಸಲಾಗಿದೆ.
ಲೋಕಸಭೆ ಚುನಾವಣೆಗಳು ಹತ್ತಿರುವಾಗುತ್ತಿರುವ ನಡುವೆಯೇ ಈ ನೇಮಕವಾಗಿದ್ದು ತೀವ್ರ ಕುತೂಹಲ ಕೆರಳಿಸಿತ್ತು. ಈ ಮೊದಲು ಸಹೋದರ ರಾಹುಲ್ ಗಾಂಧಿ, ತಾಯಿ ಸೋನಿಯಾ ಗಾಂಧಿಯವರ ಪ್ರಚಾರ ಸಭೆಗಳಲ್ಲಿ ಪ್ರಿಯಾಂಕಾ ಪಾಲ್ಗೊಳ್ಳುತ್ತಿದ್ದರಾದರೂ ಅಧಿಕೃತವಾಗಿ ಪಕ್ಷದಲ್ಲಿ ಯಾವುದೇ ಹುದ್ದೆಗಳನ್ನು ವಹಿಸಿಕೊಂಡಿರಲಿಲ್ಲ. ಕಳೆದ ವರ್ಷ ಎಐಸಿಸಿ ಅಧ್ಯಕ್ಷ ಗಾದಿಯಿಂದ ಕೆಳಗಿಳಿದಿದ್ದ ಸೋನಿಯಾ ಗಾಂಧಿ ಪುತ್ರ ರಾಹುಲ್ ಗಾಂಧಿಯನ್ನು ಆ ಹುದ್ದೆಗೆ ನೇಮಕ ಮಾಡಿದ್ದರು. ಇದೀಗ ಗಾಂಧಿ ಕುಟುಂಬದ ಮತ್ತೊಂದು ಕುಡಿ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದಂತಾಗಿದೆ.
ಮೊದಲೇ ಉತ್ತರಪ್ರದೇಶ ರಾಜ್ಯದಲ್ಲಿ ಮತ್ತೊಮ್ಮೆ ಚಿಗುರೊಡೆಯಲು ಹರಸಾಹಸ ಮಾಡುತ್ತಿದ್ದ ಕಾಂಗ್ರೆಸ್ ಪಕ್ಷದ ಆಸೆಗೆ ಮತ್ತೊಮ್ಮೆ ತಣ್ಣೀರು ಬಿದ್ದಿತ್ತು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದಿರಲು ಇತರ ಜಾತ್ಯತೀತ ಪಕ್ಷಗಳು ನಿರ್ಧರಿಸಿದವು. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಎರಡೂ ಮಹಾಮೈತ್ರಿಯ ನೇತೃತ್ವ ವಹಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಪಕ್ಷಗಳನ್ನ ತನ್ನ ಕೂಟಕ್ಕೆ ಸೇರಿಸಿಕೊಳ್ಳುವ ಕೆಲಸ ಮಾಡಿದೆ. ಹೀಗಾಗಿ ಕಾಂಗ್ರೆಸ್ ಏಕಾಂಗಿಯಾಗಿಯೇ ಸ್ಪರ್ಧಿಸುವುದು ಅನಿವಾರ್ಯವಾಗಿದೆ.
ಈ ಮಹಾಮೈತ್ರಿಯು ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಿರಲಿದೆ. ಎಸ್ಪಿ, ಬಿಎಸ್ಪಿ ಜೊತೆಗೆ ಅಜಿತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕ ದಳ್ ಕೂಡ ಇರಲಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರದಲ್ಲಿ ಸಚಿವರಾಗಿರುವ ಓಂ ಪ್ರಕಾಶ್ ರಾಜಭರ್ ಅವರ ನೇತೃತ್ವದ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ ಹಾಗೂ ಕೃಷ್ಣ ಪಟೇಲ್ ಬಣದ ಅಪ್ನಾ ದಳ್ ಪಕ್ಷಗಳನ್ನೂ ಮೈತ್ರಿ ತೆಕ್ಕೆಗೆ ತೆಗೆದುಕೊಳ್ಳಲು ಅಖಿಲೇಶ್ ಯಾದವ್ ಮತ್ತು ಮಾಯಾವತಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಸಣ್ಣಪುಟ್ಟ ಪಕ್ಷಗಳನ್ನ ಜೋಡಿಸಿಕೊಳ್ಳುತ್ತಿರುವ ಎಸ್ಪಿ-ಬಿಎಸ್ಪಿ ಪಕ್ಷಗಳಿಗೆ ಕಾಂಗ್ರೆಸ್ನಂತಹ ಸಂಪನ್ಮೂಲಭರಿತ ಪಕ್ಷ ಬೇಡವಾಗಿದ್ದು ಕುತೂಹಲದ ವಿಷಯವೇ.