ಬೆಂಗಳೂರು,ಫೆ.11- ನಗರ ವ್ಯಾಪ್ತಿಯಲ್ಲಿ ಸಂಚಾರ ಸಮಸ್ಯೆ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಲು 15 ವರ್ಷದ ಹಳೆ ವಾಹನಗಳನ್ನು ನಿಷೇಧಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.
ನಗರದ ಪುರಭವನದ ಸಭಾಂಗಣದಲ್ಲಿಂದು ಸಾರಿಗೆ ಇಲಾಖೆ ಸಂಚಾರ ಪೊಲೀಸ್ ಸಹಯೋಗದಲ್ಲಿ ಆಯೋಜಿಸಿದ್ದ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2019ರ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜನಸಂಖ್ಯೆ ಹೆಚ್ಚಾದಂತೆ ಒಬ್ಬೊಬ್ಬರೇ ಕಾರನ್ನು ಬಳಸುತ್ತಿದ್ದಾರೆ. ಇದರಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು ಹಾಗೂ ಟ್ರಾಫಿಕ್ ಸಮಸ್ಯೆ ಕೂಡ ವಿಪರೀತವಾಗಿದೆ. ಆದ್ದರಿಂದ ಜನರಲ್ಲಿ ಮೆಟ್ರೋ, ಬಿಎಂಟಿಸಿ ಬಸ್ ಬಳಸಿ ವಾಯುಮಾಲಿನ್ಯ ಕಡಿಮೆ ಮಾಡಿ ಎಂಬ ಅರಿವು ಮೂಡಿಸಲಾಗುವುದು ಎಂದರು.
ರಾಜ್ಯದಲ್ಲಿ ಒಟ್ಟು 7 ಕೋಟಿ ಜನಸಂಖ್ಯೆಯ ಇದೆ. ಇದರಲ್ಲಿ ಅರ್ಧ ಭಾಗದಷ್ಟು ವಾಹನಗಳು ನೋಂದಣಿಯಾಗಿದೆ.ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಒಂದು ಕೋಟಿ ಜನಸಂಖ್ಯೆ ಇದ್ದು, ಇಲ್ಲಿಯೇ ಒಂದು ಕೋಟಿ ವಾಹನಗಳ ಓಡಾಟವಿದೆ.ಇದರ ನಡುವೆ ಹೊರ ರಾಜ್ಯಗಳಿಂದಲೂ ಲಕ್ಷಾಂತರ ವಾಹನಗಳು ಬರುತ್ತವೆ ಎಂದು ವಿವರಿಸಿದರು.
ಅಂಕಿ ಅಂಶಗಳ ಪ್ರಕಾರ ವಾಯುಮಾಲಿನ್ಯದಂತಹ ಕಾರಣದಿಂದಲೇ ಬೆಂಗಳೂರಿನಲ್ಲಿ 4 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ.ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಯಾವುದೇ ವಾಹನ ಚಾಲಕ ಕಾನೂನು ನಿಯಮ ಪಾಲಿಸಿದರೆ ಶೇ.50ರಷ್ಟು ಅಪಘಾತ ತಪ್ಪಿಸಲು ಸಾಧ್ಯವಾಗುತ್ತದೆ ಎಂದರು.
ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಬಂದಾಗ ಮಾತ್ರ ಸೆಲ್ ಪೋನ್‍ಗಳಲ್ಲಿ ಶುಭಾಷಯಗಳನ್ನು ಹೇಳಿದರೆ ದೇಶಾಭಿಮಾನವಾಗುವುದಿಲ್ಲ. ವಿದ್ಯುತ್ ಉಳಿಸುವುದು, ವಾಯು ಮಾಲಿನ್ಯ ತಡೆಗಟ್ಟುವುದು, ನೀರು ಸಂರಕ್ಷಣೆ ಮಾಡುವುದು, ಕಾನೂನು ನೀತಿ ನಿಯಮಗಳನ್ನು ಪಾಲಿಸುವ ಮೂಲಕ ದೇಶಾಭಿಮಾನ ತೋರಿಸಬೇಕು ಎಂದರು.
ವಾಹನ ಚಾಲಿಸುವಾಗ ಸೀಟ್ ಬೆಲ್ಟ್, ಹೆಲ್ಮೆಟ್ ಧರಿಸುವುದು ಹಾಗೂ ಸೂಚನಾ ಫಲಕಗಳಲ್ಲಿನ ಮಾಹಿತಿಗಳನ್ನು ಅನುಸರಿಸುವುದರಿಂದ ಅಪಘಾತಗಳನ್ನು ತಡೆಗಟ್ಟಬಹುದು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಉದಯ್ ಗರುಡಾಚಾರ್, ಎನ್.ಎ.ಹ್ಯಾರಿಸ್, ನಟಿ ರಾಗಿಣಿ, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಹರಿಶೇಖರನ್ ಸೇರಿದಂತೆ ಮುಂತಾದವರಿದ್ದರು.