ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಈ ಮೂರು ಮಹತ್ವದ ಅಂಗಗಳು: ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು

ಬೆಂಗಳೂರು,ಫೆ.10- ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಅಧಿಕಾರಗಳು ಮತ್ತು ಕಾರ್ಯ ನಿರ್ವಹಣೆ ಬಗ್ಗೆ ನಮ್ಮ ಸಂವಿಧಾನದಲ್ಲಿ ಸ್ಪಷ್ಟವಾದ ಚೌಕಟ್ಟು ರೂಪಿಸಲಾಗಿದೆ. ಈ ಮೂರು ಮಹತ್ವ ಅಂಗಗಳ ಮೇಲೆ ಯಾರೇ ಆಗಲಿ ದಬ್ಬಾಳಿಕೆ ಮಾಡುವುದು ಸರಿಯಲ್ಲ ಎಂದು ಉಪರಾಷ್ಟ್ರಪತಿ ಡಾ.ಎಂ.ವೆಂಕಯ್ಯನಾಯ್ಡು ಇತ್ತೀಚಿನ ರಾಜಕೀಯ ವಿದ್ಯಮಾನಗಳ ಬಗ್ಗೆ ವಾಖ್ಯಾನಿಸಿದ್ದಾರೆ.

ಪ್ರಜಾಪ್ರಭುತ್ವದ ವ್ಯವಸ್ಥೆಯ ಈ ಎಲ್ಲಾ ಮೂರು ಆಧಾರಸ್ತಂಭಗಳ ನಡುವೆ ಸೂಕ್ಷ್ಮ ಸಮತೋಲನವನ್ನು ಎಲ್ಲ ಕಾಲದಲ್ಲೂ ನಿರ್ವಹಣೆ ಮಾಡಬೇಕು. ಯಾರೂ ಕೂಡ ಇನ್ನೊಬ್ಬರ ಪ್ರದತ್ತವಾದ ಅಧಿಕಾರವನ್ನು ಆಕ್ರಮಿಸಬಾರದು ಎಂದು ಅವರು ಸಲಹೆ ಮಾಡಿದ್ದಾರೆ.

ಬೆಂಗಳೂರಿನಲ್ಲಿಂದು ನಡೆದ ದಿ ಹಡ್ಡಲ್ ಸಮಾವೇಶದಲ್ಲಿ ಭಾರತ-ನಮ್ಮ ಅವಕಾಶಗಳು ಮತ್ತು ಸವಾಲುಗಳ ಕುರಿತ ವಿಷಯದ ಮೇಲೆ ಅರ್ಥಗರ್ಭಿತವಾಗಿ ಮಾತನಾಡಿದ ಉಪರಾಷ್ಟ್ರಪತಿಯವರು, ಸಂವಿಧಾನ ನಿಗದಿಗೊಳಿಸಿರುವ ಚೌಕಟ್ಟಿನ ಒಳಗೆ ಈ ಪ್ರತಿ ಅಂಗಗಳು ಎಲ್ಲಿಯವರೆಗೆ ಸುಗಮವಾಗಿ ಕಾರ್ಯ ನಿರ್ವಹಿಸುತ್ತದೆಯೋ ಅಲ್ಲಿಯವರೆಗೂ ಪ್ರಜಾಪ್ರಭುತ್ವದ ಚಕ್ರ ಅಷ್ಟೇ ಸುಗಮವಾಗಿ ಚಲಿಸುತ್ತದೆ ಎಂದು ಬಣ್ಣಿಸಿದರು.

ದೇಶದ ಆರ್ಥಿಕ ವಿಷಯ ಕುರಿತು ಪ್ರಸ್ತಾಪಿಸಿದ ನಾಯ್ಡು, ದೇಶದ ಸರ್ವಾಂಗೀಣ ಬೆಳವಣಿಗೆ, ರೈತರ ದುರಾವಸ್ಥೆ ಅಂತ್ಯಗೊಳಿಸುವಿಕೆ, ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸುವಿಕೆ, ಬಡತನ ಮತ್ತು ಅನಕ್ಷರತೆ ನಿರ್ಮೂಲನೆ, ಸೌಲಭ್ಯ ವಂಚಿತ ಮತ್ತು ದುರ್ಬಲ ವರ್ಗಗಳ ಸಬಲೀಕರಣ, ಭ್ರಷ್ಟಾಚಾರ ಪಿಡುಗು ಹೋರಾಟ, ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಅಂತರ ನಿವಾರಣೆ- ಈ ಎಲ್ಲವನ್ನೂ ಸರಿಪಡಿಸಲು ಎಲ್ಲ ರಾಜಕೀಯ ಪಕ್ಷಗಳು ಒಮ್ಮತದ ರಾಜಕಾರಣ ಅನುಸರಿಸುವ ಅಗತ್ಯವಿದೆ ಎಂದು ಹೇಳಿದರು.

ಭಾರತದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಲು ಎಲ್ಲ ರಾಜಕೀಯ ಪಕ್ಷಗಳು ಮತ್ತು ಮುಖಂಡರು ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಶ್ರಮಿಸಬೇಕು. ಸಮಸ್ಯೆ ಮತ್ತು ಸವಾಲುಗಳ ವಿರುದ್ದ ಸಮಾರೋಪಾದಿಯಲ್ಲಿ ಕ್ರಮ ಕೈಗೊಳ್ಳದಿದ್ದರೆ ಅಭಿವೃದ್ಧಿಯ ಫಲ ನಮಗೆ ಲಭಿಸುವುದಿಲ್ಲ ಎಂದು ನಾಯ್ಡು ವಿಶ್ಲೇಷಿಸಿದರು.

ದೇಶದ ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕುರಿತು ಪ್ರಸ್ತಾಪಿಸಿದ ಅವರು, ಉತ್ಕøಷ್ಟತೆ ಮತ್ತು ಸೃಜನಾತ್ಮಕತೆಗೆ ಹೆಚ್ಚು ಒತ್ತು ನೀಡುವ ಮೂಲಕ ವಿದ್ಯಾರ್ಥಿಗಳ ಸಮಗ್ರತಾ ದೃಷ್ಟಿಯ ಅಭಿವೃದ್ದಿಗೆ ಅನುವು ಮಾಡಿಕೊಡಬೇಕು.ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಸಹ ಉನ್ನತೀಕರಣಗೊಳಿಸುವ ಅಗತ್ಯವಿದೆ.ಇದೇ ವೇಳೆ ನಮ್ಮ ಸಂಸ್ಕøತಿ, ಪರಂಪರೆ ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸಲು ಆದ್ಯತೆ ನೀಡುವ ಬಗ್ಗೆ ವಿದ್ಯಾರ್ಥಿ ಸಮುದಾಯದಲ್ಲಿ ಅರಿವು ಮೂಡಿಸುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ