ಮತ ಹಾಕಿ ಗೆಲ್ಲಿಸಿದ ಜನ ನಮ್ಮನ್ನು ನೋಡಿ ಉಗಿಯಬಾರದು: ಸ್ಪೀಕರ್ ರಮೇಶ್ ಕುಮಾರ್

ರಾಯಚೂರು,ಫೆ.10- ನಾನು ಹಿಟ್ಲರ್ ಅಲ್ಲ. ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡುತ್ತೇನೆ ಎಂದು ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲದ ಬಗ್ಗೆಯೂ ನನಗೆ ಗೊತ್ತಿಲ್ಲ. ನಾನು ಹಿಟ್ಲರ್ ಅಲ್ಲ. ಕಾನೂನಿನ ಪರಿಮಿತಿಯಲ್ಲೇ ನಾನು ಕೆಲಸ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.

ಆಪರೇಷನ್ ಕಮಲ ಆಡಿಯೋ ಕುರಿತಂತೆ ನಾಳೆ ಸದನದಲ್ಲಿ ಚರ್ಚಿಸುತ್ತೇನೆ. ಯಾರು ಮಾರಾಟ ಆಗುತ್ತಾರೋ, ಯಾರು ದುಡ್ಡು ಕೊಡುತ್ತಾರೋ ಗೊತ್ತಿಲ್ಲ. ಆಪರೇಷನ್ ಕಮಲದ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಪ್ರಸಕ್ತ ರಾಜಕೀಯ ಬೆಳವಣಿಗೆಗೆ ನೊಂದಿದ್ದೇನೆ. ಇನ್ನೊಬ್ಬರಿಗೆ ನೋವು ಕೊಟ್ಟು ಬದುಕಲು ನಾನು ಇಷ್ಟ ಪಡಲ್ಲ. ನಾವು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದರು.

ಮತ ಹಾಕಿ ಗೆಲ್ಲಿಸಿದ ಜನ ನಮ್ಮನ್ನು ನೋಡಿ ಉಗಿಯುವಂತೆ ಇರಬಾರದು. ಅಂತ ಬೇಸರ ವ್ಯಕ್ತಪಡಿಸಿದ ರಮೇಶ್‍ಕುಮಾರ್, ಶಾಸಕರು ಸದನಕ್ಕೆ ಬರಲು ಆಗದಿದ್ದರೆ ತಿಳಿಸಬೇಕು. ಇಲ್ಲ ಸದನಕ್ಕೆ ಬರಬೇಕು ಎಂದು ಅವರಿಗೆ ತಿಳಿದಿರಬೇಕು. ಬರಲು ಆಗದಿದ್ದರೆ ಚುನಾವಣೆಗೆ ಯಾಕೆ ನಿಲ್ಲಬೇಕು ಎಂದು ಪ್ರಶ್ನಿಸಿದರು.

ರಾಜ್ಯ ಮಾತ್ರವಲ್ಲ ದೇಶದ ರಾಜಕೀಯವೇ ಇಂದು ಹಾಳಾಗಿಹೋಗಿದೆ. ಎಲ್ಲ ಭ್ರಷ್ಟಾಚಾರಕ್ಕೆ ಚುನಾವಣೆಯೇ ತಳಹದಿಯಾದಂತಾಗಿದೆ.ಕಾಯ್ದೆಗಳಲ್ಲಿ ಸುಧಾರಣೆಗಳನ್ನು ತರಬೇಕು. ಆದರೆ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಜನ್ಮತಾಳಿದ ಮನುಷ್ಯನೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಗೆ ಇದೇ ವೇಳೆ ಟಾಂಗ್ ಕೊಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ